ಬಿಎಸ್‍ವೈ ಸರ್ಕಾರ ಪಾಪದ ಕೂಸು ಹೆಚ್ಚು ದಿನ ಉಳಿಯಲ್ಲ: ಎಂಬಿಪಿ

ವಿಜಯಪುರ: ನೂತನವಾಗಿ ಅಧಿಕಾರ ಸ್ವೀಕರಿಸಿರುವ ಬಿಎಸ್ ಯಡಿಯೂರಪ್ಪ ಅವರ ಸರ್ಕಾರ ಪಾಪದ ಕೂಸು. ಇದು ಹೆಚ್ಚು ದಿನ ಉಳಿಯಲ್ಲ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ಬಿಎಸ್‍ವೈ ವಿರುದ್ಧ ಗುಡುಗಿದ್ದಾರೆ.

ಅಂತರಾಷ್ಟ್ರೀಯ ಮ್ಯಾರಥಾನ್‍ಗೆ ಎಂ.ಬಿ ಪಾಟೀಲ್ ಅವರು ವಿಜಯಪುರದ ಗೋಲಗುಂಬಜ್‍ನಲ್ಲಿ ಚಾಲನೆ ನೀಡಿದರು. ಅಲ್ಲದೆ ತಾವು ಕೂಡ 3 ಕಿ.ಮೀನ ಆಫ್ ಮ್ಯಾರಥಾನಲ್ಲಿ ಓಡಿ ಕ್ರೀಡಾಪಟುಗಳಿಗೆ ಹುರಿದುಂಬಿಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಎಸ್‍ವೈ ಸರ್ಕಾರ ಪಾಪದ ಕೂಸು. ಅವರಿಗೆ ಸಿಎಂ ಆಗುವ ಅರ್ಜೆನ್ಸಿ ಇತ್ತು. ಆದರೆ ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಸಿಎಂ ಅವರಿಗೆ ಆಸಕ್ತಿ ಇಲ್ಲ. ಅವರು ಒನ್ ಮ್ಯಾನ್ ಶೋ ಮಾಡುವ ಚಿಂತನೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಇದೊಂದು ಅನೈತಿಕ ಸರ್ಕಾರ. ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಸಿಎಂ ಅವರು ಒಕ್ಕಲಿಗರ ಟಾರ್ಗೆಟ್ ಮಾಡುತ್ತಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ಹೀಗಾಗಿ ಬಿಎಸ್‍ವೈ ಅವರಿಗೆ ಹೊಸ ಹುರುಪು ಇದೆ. ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದ ಬಿಜೆಪಿಯೇ ಈಗ ಸಂಪೂರ್ಣ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಟಿಪ್ಪು ಜಯಂತಿಯನ್ನು ರದ್ದು ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ. ಇದು ಶೋಭೆ ತರುವುದಿಲ್ಲ. ಆಡಳಿತದಲ್ಲಿ ಜಾತಿ ಮುಖ್ಯವಲ್ಲ, ಆಡಳಿತಕ್ಕೆ ಒಳ್ಳೆಯ, ನಿಷ್ಠಾವಂತ ಅಧಿಕಾರಿಗಳು ಮುಖ್ಯವಾಗಿರುತ್ತಾರೆ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಹೇಗೆ ಆಡಳಿತಕ್ಕೆ ಬಂದಿದೆ ಎಂದು ಜನರಿಗೆ ತಿಳಿದಿದೆ. ಇದು ಅವರ ಷಡ್ಯಂತ್ರ, ಪ್ರಜಾಪ್ರಭುತ್ವದ ಕಗ್ಗೊಲೆ ಎನ್ನುವ ವಿಚಾರ ಇಡೀ ರಾಜ್ಯಕ್ಕೆ ತಿಳಿದಿದೆ. ಈ ಅನೈತಿಕತೆ ಈಗ ಬೆಳಕಿಗೆ ಬಂದಿದೆ ಎಂದು ವ್ಯಂಗ್ಯವಾಡಿದರು.

ವೃಕ್ಷೋತ್ಥಾನ ಸಂಸ್ಥೆ ಅಡಿಯಲ್ಲಿ ಅಂತರಾಷ್ಟ್ರೀಯ ಮ್ಯಾರಥಾನ್ ಸ್ಪರ್ಧೆ ನಡೆಯುತ್ತಿದೆ. ಈ ಮ್ಯಾರಥಾನ್ ಯಶಸ್ವಿ ನಾಲ್ಕನೇ ವರ್ಷ ಪೂರೈಸಿದ್ದು, ಇದರ ಬ್ರ್ಯಾಂಡ್ ಅಂಬಾಸಿಡಾರ್ ಆಗಿರುವ ಚಿತ್ರ ನಟ ಯಶ್ ಕಾರಣಾಂತರಗಳಿಂದ ಈ ಬಾರಿ ಗೈರಾಗಿದ್ದರು. ಯಶ್ ಕೆಜಿಎಫ್ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಿರುವ ಕಾರಣಕ್ಕೆ ಮ್ಯಾರಥಾನ್‍ನಲ್ಲಿ ಪಾಲ್ಗೊಳ್ಳಲಾಗಲಿಲ್ಲ ಎಂದು ಎಂಬಿ ಪಾಟೀಲ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *