ಟಿಪ್ಪು ದೇಶಪ್ರೇಮಿ, ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟಿದ್ದ: ವಾಟಾಳ್ ನಾಗರಾಜ್

ರಾಮನಗರ: ರಾಜ್ಯ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ರಾಮನಗರದಲ್ಲಿ ಇಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಐಜೂರು ವೃತ್ತದ ಬಳಿಯ ಕೆ.ಎಸ್‍.ಆರ್‍.ಟಿ.ಸಿ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಪ್ಪು ಭಾವುಟವನ್ನು ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಟಿಪ್ಪು ಸುಲ್ತಾನ್ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕನಲ್ಲ. ಆತ ದೇಶಪ್ರೇಮಿ, ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟು ಹೋರಾಟ ನಡೆಸಿದವನು ಎಂದು ಹೇಳಿದರು.

ಇದೀಗ ಬಿಜೆಪಿ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿಯಿಂದ ಕೋಮುಗಲಭೆ ಉಂಟಾಗುತ್ತೆ ಎಂದು ರದ್ದು ಮಾಡಿದೆ. ಇದು ಸರಿಯಲ್ಲ ಕೂಡಲೇ ಟಿಪ್ಪು ಜಯಂತಿ ರದ್ದತಿ ಆದೇಶವನ್ನು ವಾಪಸ್ ಪಡೆದು, ಸರ್ಕಾರದಿಂದ ಆಚರಣೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಅಲ್ಲದೇ ಭಾನುವಾರ ಟಿಪ್ಪು ಸಮಾಧಿ ಬಳಿ ವಿಶೇಷ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.

ಇದರ ಜೊತೆಗೆ ರೈತರು, ಹೋರಾಟಗಾರರ ಮೇಲಿನ ಪ್ರಕರಣಗಳನ್ನು ರದ್ದುಗೊಳಿಸಬೇಕು. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು. ರಾಜ್ಯದ ರೈತರಿಗೆ ನೀರಿಲ್ಲ ಅಂತಹದರಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಸರಿಯಿಲ್ಲ. ರಾಜ್ಯದಲ್ಲಿ ಮೂರು ಮೂರು ತಿಂಗಳಿಗೆ ಒಬ್ಬೊಬ್ಬ ಸಿಎಂ ಬರುತ್ತಿದ್ದಾರೆ. ಒಂದೊಂದು ಜಯಂತಿಗಳು ಬರುತ್ತವೆ ಹೋಗುತ್ತದೆ. ಅಧಿಕಾರಿಗಳ ವರ್ಗಾವಣೆ ಜೋರಾಗಿ ನಡೆಯುತ್ತಿದ್ದು ಆಡಳಿತ ಕುಸಿಯುತ್ತಿದೆ ಎಂದು ಕಿಡಿಕಾರಿದರು.

ಸರ್ಕಾರದ ಜಂಜಾಟದಿಂದ ಮೇಕೆದಾಟು ಅಣೆಕಟ್ಟೆ ನಿರ್ಮಿಸುವ ಕಾರ್ಯ ನೆನೆಗುದಿಗೆ ಬಿದ್ದಿದೆ. ಮುಂದಿನ ವಾರ ಮೇಕೆದಾಟಿನಲ್ಲಿ ತಮ್ಮ ಚಳುವಳಿ ವೇದಿಕೆ ಮೂಲಕ ಶಂಕುಸ್ಥಾಪನೆ ನೆರವೇರಿಸುವುದಾಗಿ ಹೇಳಿದರು.

Comments

Leave a Reply

Your email address will not be published. Required fields are marked *