ಪ್ರವಾಹದಲ್ಲಿ ವಾಸುದೇವನಂತೆ ಮಗುವನ್ನು ತಲೆಮೇಲೆ ಹೊತ್ತ ಪೊಲೀಸ್

ಗಾಂಧಿನಗರ: ಗುಜರಾತಿನ ವಡೋದರಾದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಮಗುವೊಂದನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಇರಿಸಿ, ನೀರಿನಲ್ಲಿ ತಲೆಮೇಲೆ ಹೊತ್ತು ರಕ್ಷಣೆ ಮಾಡಿದ್ದಾರೆ.

ಪ್ರವಾಹದಿಂದ ವಡೋದರಾ ಜಲಾವೃತಗೊಂಡಿದ್ದು, ಎಲ್ಲಾ ಪ್ರದೇಶದಲ್ಲೂ ಸುಮಾರು 4-5 ಅಡಿಯಷ್ಟು ನೀರು ತುಂಬಿದೆ. ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆಯಲ್ಲಿ ನಗರದ ಪೊಲೀಸ್ ಸಿಬ್ಬಂದಿ, ಎನ್‍ಡಿಆರ್‍ಎಫ್ ಸಿಬ್ಬಂದಿ ತೊಡಗಿದ್ದಾರೆ. ಈ ಮಧ್ಯೆ ತಲೆಮೇಲೆ ವಾಸುದೇವ ಕೃಷ್ಣನನ್ನು ಹೊತ್ತುಕೊಂಡು ಹೋದಂತೆ ರಾವ್‍ಪುರ ಪೊಲೀಸ್ ಠಾಣೆಯ ಎಸ್‍ಪಿ ಜಿ.ಕೆ ಚಾವ್ಡಾ ಅವರು ಪ್ರವಾಹದಲ್ಲಿ ಸಿಲುಕಿದ್ದ ಒಂದು ತಿಂಗಳ ಹೆಣ್ಣು ಮಗುವನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಮಲಗಿಸಿ, ತಲೆಮೇಲೆ ಹೊತ್ತು ರಕ್ಷಿಸಿದ್ದಾರೆ.

ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಜೊತೆಗೂಡಿ ದೇವಪುರದ ವಿಶ್ವಾಮಿತ್ರ ರೈಲ್ವೇ ನಿಲ್ದಾಣದ ಆಸುಪಾಸಿನಲ್ಲಿದ್ದ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುತ್ತಿದ್ದರು. ಈ ವೇಳೆ ಓರ್ವ ದಂಪತಿ ತಮ್ಮ 1 ತಿಂಗಳ ಮಗುವನ್ನು ಹಿಡಿದು ನೀರನ್ನು ದಾಟಲು ಹಿಂಜರಿಯುತ್ತಿದ್ದರು. ಆಗ ಚಾವ್ಡಾ ಅವರು ದಂಪತಿಗೆ ಧೈರ್ಯ ತುಂಬಿ ಮಗುವನ್ನು ತಲೆಮೇಲೆ ಹೊತ್ತುಕೊಂಡು ಬಂದು ರಕ್ಷಿಸಿದ್ದಾರೆ. ಈ ರಕ್ಷಣೆ ಕಾರ್ಯಾಚರಣೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪೊಲೀಸ್ ಸಿಬ್ಬಂದಿ ಕಾರ್ಯ ಎಲ್ಲರ ಮನ ಗೆದ್ದಿದೆ.

ಈ ಬಗ್ಗೆ ಗುಜರಾತಿನ ಐಪಿಎಸ್ ಅಧಿಕಾರಿಯೊಬ್ಬರು ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿ, ಫೋಟೋ ಹಾಗೂ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಡೋದರಾ ಪೊಲೀಸ್ ಸಿಬ್ಬಂದಿ ಮಾನವೀಯತೆ ಮೆರೆದಿರುವ ಕಾರ್ಯ ನೋಡಿ ಹೆಮ್ಮೆಯಾಗುತ್ತಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಗುರುವಾರದವರೆಗೆ ವಡೋದರಾದಲ್ಲಿ 499 ಮಿ.ಮಿ ಮಳೆಯಾಗಿದೆ. ಇದರಿಂದ ಅಜ್ವಾ ಡ್ಯಾಮ್ ಭರ್ತಿಯಾಗಿದಕ್ಕೆ ನೀರನ್ನು ಹೊರಬಿಡಲಾಗಿತ್ತು. ಪರಿಣಾಮ ನಗರಕ್ಕೆ ನೀರು ನುಗ್ಗಿ ಪ್ರವಾಹ ಉಂಟಾಗಿದೆ. ಕೆಲವು ಪ್ರದೇಶಗಳಲ್ಲಿ ಸುಮಾರು 6 ಅಡಿಯವರೆಗೂ ನೀರು ನಿಂತಿದೆ. ವಿಶ್ವಾಮಿತ್ರ ನದಿಯಲ್ಲಿದ್ದ ಮಸಳೆಗಳು ಕೂಡ ನಗರವನ್ನು ಪ್ರವೇಶಿಸಿದ್ದು, ಸರ್ಕಾರೇತರ ಸಂಸ್ಥೆಗಳ ಕಾರ್ಯಕರ್ತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಸೆರೆಹಿಡಿಯುವ ಕಾರ್ಯವನ್ನು ನಡೆಸುತ್ತಿದ್ದಾರೆ. ಜೊತೆಗೆ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯದಲ್ಲಿ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಹಾಗೂ ಸ್ಥಳೀಯ ಪೊಲೀಸರು ತೊಡಗಿದ್ದಾರೆ.

Comments

Leave a Reply

Your email address will not be published. Required fields are marked *