ಬಳ್ಳಾರಿ: ಕೌಟುಂಬಿಕ ಕಲಹದಿಂದ ಮಕ್ಕಳಿಬ್ಬರಿಗೆ ವಿಷ ಕುಡಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ತಾಯಿ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬಳ್ಳಾರಿಯ ಮೇದರಾಕೇತಯ್ಯ ನಗರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆ ತನ್ನ ಮಕ್ಕಳಿಬ್ಬರನ್ನು ನೀರಿನಲ್ಲಿ ಮುಳುಗಿಸಿ ಕೊಂದು ತಾನೂ ಕೂಡ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಬಳ್ಳಾರಿಯ ಮೇದಾರಕೇತಯ್ಯ ನಗರ ನಿವಾಸಿ ಲಕ್ಷ್ಮೀ ತಮ್ಮ ಇಬ್ಬರು ಮಕ್ಕಳಾದ ಮೂರು ವರ್ಷದ ಮಗು ಉದಯ್ ಹಾಗೂ ಒಂದೂವರೆ ವರ್ಷದ ಭೂಮಿಕಾಳನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ಬಳಿಕ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಾಹಿತಿ ತಿಳಿದು ಸ್ಥಳಕ್ಕೆ ಕೌಲ್ ಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ನಡೆಯುವ ಮುನ್ನ ಜಿಲ್ಲೆಯ ಕುರುಗೋಡು ತಾಲೂಕಿನ ಹಳೆ ನೆಲ್ಲೂಡಿ ಗ್ರಾಮದಲ್ಲಿ ತಾಯಿ ಮಕ್ಕಳಿಬ್ಬರಿಗೆ ವಿಷ ಕುಡಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆ ಘಟನೆಯಲ್ಲಿ ತಾಯಿ ಮತ್ತು ಒಬ್ಬ ಮಗಳು ಮೃತಪಟ್ಟಿದ್ದು, ಮತ್ತೋರ್ವ ಮಗಳು ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Leave a Reply