22.5 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ನಾಶಪಡಿಸಿದ ಅಬಕಾರಿ ಇಲಾಖೆ

ಕಾರವಾರ: ಚುನಾವಣೆ ಬಳಿಕ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕು ವ್ಯಾಪ್ತಿಯಲ್ಲಿ ಜಪ್ತಿ ಮಾಡಲಾದ ಲಕ್ಷಾಂತರ ಮೌಲ್ಯದ ಅಕ್ರಮ ಮದ್ಯವನ್ನ ಅಬಕಾರಿ ಇಲಾಖೆ ವತಿಯಿಂದ ಇಂದು ನಾಶಪಡಿಸಲಾಯಿತು.

ಅಬಕಾರಿ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಒಟ್ಟು 109 ಅಕ್ರಮ ಮದ್ಯ ಸಾಗಾಟ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಒಟ್ಟು 22,50,866 ಲಕ್ಷ ರೂ. ಮೌಲ್ಯದ ಗೋವಾ ಫೆನ್ನಿ, ಕರ್ನಾಟಕ ಹಾಗೂ ಇತರೇ ರಾಜ್ಯಗಳ ಮದ್ಯ ಸೇರಿ ಸುಮಾರು 8,654 ಲೀಟರ್ ಅಕ್ರಮ ಮದ್ಯವನ್ನ ವಶಪಡಿಸಿಕೊಳ್ಳಲಾಗಿತ್ತು. ಈ ಮದ್ಯವನ್ನು ಇಂದು ಅಬಕಾರಿ ಇಲಾಖೆ ಸಿಬ್ಬಂದಿ ನಾಶ ಮಾಡಿದ್ದಾರೆ.

ವಶಪಡಿಸಿಕೊಳ್ಳಲಾಗಿದ್ದ ಅಕ್ರಮ ಗೋವಾ ಮದ್ಯವನ್ನ ಇಲಾಖೆ ಸಂಗ್ರಹಿಸಿ ಇಟ್ಟಿತ್ತು. ಇಂದು ಅಬಕಾರಿ ಉಪ ಆಯುಕ್ತರ ಕಚೇರಿ ಹಿಂಬದಿಯಲ್ಲಿಯೇ ಇಲಾಖೆಯ ಉಪ ಆಯುಕ್ತ ಎಲ್.ಮಂಜುನಾಥ್ ಹಾಗೂ ಸಿಬ್ಬಂದಿ ಸೇರಿ ಮದ್ಯವನ್ನು ಚೆಲ್ಲಿ ನಾಶಗೊಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಉಪಆಯುಕ್ತ ಎಲ್.ಮಂಜುನಾಥ್, ಚುನಾವಣೆ ನಂತರ ವಶಪಡಿಸಿಕೊಂಡಿದ್ದ ಮದ್ಯವನ್ನು ಇಂದು ನಾಶ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಸೇರಿಕೊಂಡು ಚುನಾವಣೆ ನಂತರ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಭಾರೀ ಪ್ರಮಾಣ ಮದ್ಯವನ್ನು ವಶಪಡಿಸಿಕೊಂಡಿತ್ತು. ದಾಖಲಾದ 109 ಮೊಕದ್ದಮೆಗಳಲ್ಲಿ ಸುಮಾರು 26 ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ ನಮ್ಮ ವಶಕ್ಕೆ ನೀಡಿದ್ದಾರೆ. ಉಳಿದ 83 ಪ್ರಕರಣಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *