ಎರಡು ಕುಟುಂಬಗಳ ಮಧ್ಯೆ ಕಲ್ಲು ತೂರಾಟ – 15 ಮಂದಿಗೆ ಗಾಯ

ಬಾಗಲಕೋಟೆ: ಎರಡು ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಪರಸ್ಪರ ಕಲ್ಲು ತೂರಾಟದ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.

ಈ ಘಟನೆ ಬಾಗಲಕೋಟೆ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಹಳೆಯ ವೈಷಮ್ಯ ಇರುವ ಕಾರಣದಿಂದ ಎರಡು ಕುಟುಂಬಗಳ ಮಧ್ಯೆ ಗಲಾಟೆ ಉಂಟಾಗಿದ್ದು, ಪರಸ್ಪರ ಕಲ್ಲು ತೂರಾಟ ಮಾಡಿಕೊಂಡಿದ್ದಾರೆ. ಘರ್ಷಣೆಯಲ್ಲಿ ಸುಮಾರು 15 ಜನ ಗಾಯಗೊಂಡಿದ್ದಾರೆ.

ಚೌಡಾಪುರ ಗ್ರಾಮದ ಶಂಕರಪ್ಪ ಭಗವತಿ ಹಾಗೂ ವಾಸಪ್ಪ ಬೀರಗೊಂಡ ಕುಟುಂಬಗಳ ನಡುವೆ ಹೊಲದ ದಾರಿಗೆ ಸಂಬಂಧಿಸಿದಂತೆ ಬಹಳ ದಿನಗಳ ಹಿಂದಿನಿಂದ ವೈರತ್ವ ಇತ್ತು. ಹೀಗಾಗಿ ಎರಡು ಕುಟುಂಬದವರು ಕೈಯಲ್ಲಿ ದೊಣ್ಣೆ, ಕೊಡಲಿ ಹಿಡಿದು ಬಡಿದಾಡಿಕೊಂಡು ಕಲ್ಲು ತೂರಾಟ ಮಾಡಿದ್ದಾರೆ. ಗಲಾಟೆಯಲ್ಲಿ ಕೆಲವರಿಗೆ ಮೈಮೇಲೆ ರಕ್ತ ಹರಿಯುತ್ತಿದ್ದರೂ ಅದನ್ನು ಲೆಕ್ಕಿಸದೇ ಎದುರು ಗುಂಪಿನ ಮಹಿಳೆಯರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

ಗಲಾಟೆ ಬಿಡಿಸಲು ಪೊಲೀಸ್ ಪೇದೆ ವೈ.ಎನ್ ಧೋನಿ ಪರದಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪೊಲೀಸರ ಮೇಲೂ ಕಲ್ಲು ಬಿದ್ದ ಪರಿಣಾಮ ಪೇದೆ ಗಾಯಗೊಂಡಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಮತ್ತು ಟ್ರ್ಯಾಕ್ಟರ್‍ ಗಳನ್ನು ಜಖಂ ಗೊಳಿಸಿದ್ದಾರೆ. ಈ ಸಂಬಂಧ 20 ಕ್ಕೂ ಹೆಚ್ಚು ಜನರನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಎರಡೂ ಕಡೆಯಿಂದ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *