ಕಣ್ಣು ಮುಚ್ಚಿದ ಮೇಲೆ ನಮ್ಮ ಪಲ್ಲಕ್ಕಿ ಯಾರು ಹೊರುತ್ತಾರೆ ಗೊತ್ತಿಲ್ಲ: ಮುನಿರತ್ನ

ಬೆಂಗಳೂರು: ನಾವು ಕಣ್ಣು ಮುಚ್ಚಿದ ಮೇಲೆ ನಮ್ಮ ಪಲ್ಲಕ್ಕಿ ಯಾರು ಹೊರುತ್ತಾರೆ ಎಂಬುದು ಗೊತ್ತಿಲ್ಲ, ಈಗ ಕಣ್ಣು ತೆರೆದಿದ್ದೇವೆ. ಹಾಗಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಕೇಳಿದ್ದೇನೆ ಎಂದು ಅನರ್ಹ ಶಾಸಕ ಮುನಿರತ್ನ ಅವರು ತಿಳಿಸಿದ್ದಾರೆ.

ಮುಂಬೈಯಿಂದ ಬಂದ ಬಳಿಕ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಈ ಬಗ್ಗೆ ಏನೂ ಮಾತನಾಡುವುದಿಲ್ಲ. ಈಗ ನ್ಯಾಯಯುತವಾಗಿ ಹೋರಾಟ ಮಾಡುತ್ತೇವೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ದಾಖಲೆಯನ್ನು ಪಡೆದು ಸ್ಪೀಕರ್ ಕಚೇರಿಯಿಂದ ಸುಪ್ರೀಂ ಕೋರ್ಟಿಗೆ ಹೋಗುವುದಾಗಿ ತಿಳಿಸಿದರು.

ಅಲ್ಲದೆ ಸ್ಪೀಕರ್ ಅವರ ಈ ಪ್ರಕಿಯೆ ನಮಗೆ ಮೊದಲೇ ಗೊತ್ತಿತ್ತು. ನಾನು ಇದನ್ನು ಪಿತೂರಿ ಎಂದು ಹೇಳುವುದಿಲ್ಲ. ಈಗ ಎಲ್ಲ ಮುಗಿದಿದೆ. ನಾವೇನಿದ್ದರೂ ನ್ಯಾಯಯುತವಾಗಿ ಹೋರಾಟ ಮಾಡುತ್ತೇವೆ. ಈಗಾಗಲೇ ಕೆಲವು ಶಾಸಕರು ಸುಪ್ರೀಂ ಕೋರ್ಟಿಗೆ ತೆರಳಿದ್ದಾರೆ. ನಾವು ತಪ್ಪು ಮಾಡಿದ್ದೇವೆ ಎಂದು ನಮಗೆ ಅನಿಸುತ್ತಿಲ್ಲ. ಏಕೆಂದರೆ ಶಾಸಕ ಎಂದು ಅನಿಸಿಕೊಂಡ ಮೇಲೆ ಅವರು ಕ್ಷೇತ್ರಕ್ಕೆ ನ್ಯಾಯ ಒದಗಿಸುವುದು ಪ್ರತಿಯೊಬ್ಬ ಅವರ ಕರ್ತವ್ಯ ಎಂದರು.

ನಾನು ಅಭಿವೃದ್ಧಿ ಕೇಳಿದ್ದೇನೆ ಹೊರತು ನನ್ನ ಕುಟುಂಬಕ್ಕೆ ಅಥವಾ ನನ್ನ ಲಾಭಕ್ಕೆ ನಾನು ಬೇಡಿಕೆ ಇಟ್ಟಿಲ್ಲ. ನನಗಿದ್ದ ಒಂದು ಕನಸು ತುಮಕೂರು ರಸ್ತೆ ರಾಜ್‍ಕುಮಾರ್ ಅವರ ಸಮಾಧಿಯ ಮುಂದೆ ರಿಂಗ್ ರೋಡ್‍ನಲ್ಲಿ ಮೆಟ್ರೋ ಬರಬೇಕು ಎಂದು ಕೇಳಿದ್ದೆ. ನಾನು ಹೆಚ್ಚೇನು ಕೇಳಲಿಲ್ಲ. ಈಗ ಬೆಂಗಳೂರು ಕೇವಲ ಐಟಿಬಿಟಿಯಲ್ಲಿ ಅಭಿವೃದ್ಧಿ ಆಗುತ್ತಿದೆ. ಬೆಂಗಳೂರು ಪಶ್ಚಿಮದ ಕಡೆ ಮಧ್ಯಮ ವರ್ಗ, ಬಡ ಕುಟುಂಬ ಹೆಚ್ಚು ಇದೆ. ನಾವು ಕಣ್ಣು ಮುಚ್ಚಿದ ಮೇಲೆ ನಮ್ಮ ಪಲ್ಲಕ್ಕಿ ಯಾರು ಹೊರುತ್ತಾರೆ ಎಂಬುದು ಗೊತ್ತಿಲ್ಲ, ಈಗ ಕಣ್ಣು ತೆರೆದಿದ್ದೇವೆ. ಹಾಗಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಕೇಳಿದ್ದೇನೆ ಎಂದರು.

ಅಭಿವೃದ್ಧಿಗೆ ಸಹಕರಿಸಿ, ಗೊರಗೊಂಟೆಪಾಳ್ಯ ಜಂಕ್ಷನ್‍ಗೆ ಸಂಬಂಧಪಟ್ಟಂತೆ ರೇವಣ್ಣ ಅವರಿಗೆ ಸುಮಾರು ಪತ್ರ ಬರೆದು ಬೇಡಿಕೆ ಇಟ್ಟಿದ್ದೇನೆ. ಸಿಗ್ನಲ್ ಫ್ರೀ ಕಾರಿಡಾರ್ ಮಾಡಿಕೊಡಿ, ಎಲಿವೆಟೆಡ್ ಕಾರಿಡಾರ್ ನಮ್ಮ ಕ್ಷೇತ್ರಕ್ಕೆ ಅವಶ್ಯಕತೆ ಇದೆ. 24 ಸಾವಿರ ಕೋಟಿ ಬೆಂಗಳೂರಿಗೆ ಖರ್ಚು ಮಾಡ್ತೀರಾ. ದಯವಿಟ್ಟು ನಮ್ಮ ಮಾತು ಕೇಳಿ ಎಂದು ಕೇಳಿಕೊಂಡೆ. ಆದರೆ ಅವರು ನಮ್ಮ ಮಾತು ಕೇಳಲಿಲ್ಲ. ಸಮ್ಮಿಶ್ರ ಸರ್ಕಾರ ಎಂದರೆ ಎರಡು ಮನಸ್ಸು ಒಂದಾದ ಮೇಲೆ ಮಕ್ಕಳು ಚೆನ್ನಾಗಿರುತ್ತಾರೆ. ಎರಡು ಮನಸ್ಸು ಒಂದಾಗಿಲ್ಲ ಎಂದರೆ ಪ್ರತಿ ದಿನ ಜಗಳ, ಮುಸುಕಿನ ಗುದ್ದಾಟ ನಡೆಯುತ್ತದೆ ಎಂದು ತಿಳಿಸಿದರು.

ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೊಡದೇ ಇರುವುದರಿಂದ ಬೆಂಗಳೂರಿನ ಶಾಸಕರಿಗೆ ಮನಸ್ತಾಪ ಬಂದಿದೆ. ರಾಮಲಿಂಗಾರೆಡ್ಡಿ ಅವರು ಹಿರಿಯರು, 7 ಬಾರಿ ಶಾಸಕರಾಗಿದ್ದರು ಸಹ ಅವರಿಗೆ ಸಚಿವ ಸ್ಥಾನ ಕೊಡದೇ ಇದದ್ದು ನಮಗೆ ಬೇಸರವಾಗಿತ್ತು. ಅವರು ಬೆಂಗಳೂರಿನ ಅಭಿವೃದ್ಧಿಗೆ ಬಗ್ಗೆ ಹೆಚ್ಚು ಕೆಲಸ ಮಾಡಿದ್ದರು. ಬೆಂಗಳೂರು ಶಾಸಕರ ಸಮಸ್ಯೆ ಕೇಳುವವರು ಇಲ್ಲದಂತಾದ ಪರಿಸ್ಥಿತಿ ನಮಗೆ ಬಂದಿತ್ತು. ಇಡೀ ರಾಜ್ಯದಲ್ಲಿ ಬೆಂಗಳೂರಿಗೆ ಆದಾಯ ಬರುತ್ತದೆ. ಬೆಂಗಳೂರು ಅಭಿವೃದ್ಧಿ ಮಾಡಲು ಅವರಿಗೇನು ಕಷ್ಟ. ಕೆಲಸ ಮಾಡಬೇಕು ಎಂದು ನಾವು ಬಂದಿದ್ದೇವೆ. ಕೆಲಸ ಆಗಿಲ್ಲ ಎಂದು ಈಗ ಹೊರ ನಡೆದಿದ್ದೇವೆ. ಕ್ಷೇತ್ರದ ಜನ ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು.

ನಾವು ಯಾವುದೋ ಆಪರೇಷನ್ ಕಮಲಕ್ಕೊ ಅಥವಾ ಹಣದ ಆಮೀಷಕ್ಕೆ ಒಳಗಾಗಿಲ್ಲ. ನಾವು ಯಾವುದೇ ಕಾರಣಕ್ಕೂ ಈ ಪಾಪದ ಕೆಲಸಕ್ಕೆ ಕೈ ಹಾಕಲ್ಲ. ನಮಗೆ ಇದು ಬೇಕಾಗಿಲ್ಲ. ನಮ್ಮ ಕ್ಷೇತ್ರಕ್ಕೆ ಯಾರು ಅಭಿವೃದ್ಧಿ ಮಾಡುತ್ತಾರೋ ಅವರ ಹಿಂದೆ ಹೋಗುತ್ತೇವೆ ಎಂದು ಮುನಿರತ್ನ ಅವರು ಪ್ರತಿಕ್ರಿಯಿಸಿದ್ದಾರೆ.

Comments

Leave a Reply

Your email address will not be published. Required fields are marked *