ಅಲೋಕ್ ಕುಮಾರ್ ನೈಟ್ ರೌಂಡ್ಸ್ – ಖಾಕಿಯ ಬೆವರಿಳಿಸಿದ ಕಮಿಷನರ್

– ಡ್ರಿಂಕ್ ಆ್ಯಂಡ್ ಡ್ರೈವ್ ಸವಾರರಿಗೆ ಖಡಕ್ ವಾರ್ನಿಂಗ್
– 1000ಕ್ಕೂ ಹೆಚ್ಚು ಬೈಕ್‍ಗಳು ವಶ

ಬೆಂಗಳೂರು: ಖಡಕ್ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರು ಮತ್ತೆ ನಗರದಲ್ಲಿ ನೈಟ್ ರೌಂಡ್ಸ್ ಹೊಡೆದಿದ್ದಾರೆ. ನಗರದ ಕಾನೂನು ಸುವ್ಯವಸ್ಥೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ನೂತನ ಸಿ.ಎಂ ಬಿ.ಎಸ್ ಯಡಿಯೂರಪ್ಪ ಅವರ ಸೂಚನೆ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಫುಲ್ ಆ್ಯಕ್ಟೀವ್ ಆಗಿದ್ದಾರೆ.

ಶನಿವಾರ ರಾತ್ರಿ ಹೆಬ್ಬಾಳ, ಮಲ್ಲೇಶ್ವರಂ, ಬಾಣಸವಾಡಿ, ಕಮರ್ಷಿಯಲ್ ಸ್ಟ್ರೀಟ್ ಸೇರಿ ಹಲವೆಡೆಗಳಲ್ಲಿ ನೈಟ್ ರೌಂಡ್ಸ್ ಮಾಡಿ, ಪೊಲೀಸರಿಗೆ ನಡುಕ ಹುಟ್ಟಿಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್, ಹೆಬ್ಬಾಳ, ಮಲ್ಲೇಶ್ವರಂ ಪೊಲೀಸ್ ಠಾಣೆಗಳಿಗೆ ದಿಢೀರ್ ಭೇಟಿ ನೀಡಿದ್ದಾರೆ. ಭೇಟಿ ವೇಳೆ ಪೊಲೀಸರ ನಿರ್ಲಕ್ಷ್ಯ ಕಂಡು ಫುಲ್ ಗರಂ ಆಗಿದ್ದಾರೆ.

ಡ್ರಿಂಕ್ ಆ್ಯಂಡ್ ಡ್ರೈವ್ ಹಾಗೂ ರಾತ್ರಿ ವೇಳೆ ಹೆಲ್ಮೆಟ್ ಹಾಕದೆ ಬೈಕ್ ರೈಡ್ ಮಾಡುತ್ತಿದ್ದ ರೋಡ್ ರೋಮಿಯೋಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಕೆಲ ಡ್ರಿಂಕ್ ಆ್ಯಂಡ್ ಡ್ರೈವ್ ಚೆಕ್ ಪಾಯಿಂಟ್‍ಗಳಲ್ಲಿ ಪೊಲೀಸರ ನಿರ್ಲಕ್ಷ್ಯ ಕಂಡು ಕೆಂಡಮಂಡಲರಾಗಿದ್ದಾರೆ. ನಗರದ 20ಕ್ಕೂ ಹೆಚ್ಚಿನ ಚೆಕ್ ಪಾಯಿಂಟ್‍ಗಳಲ್ಲಿ ಕಾರು, ಬೈಕ್‍ಗಳನ್ನ ತಾಪಸಣೆ ಮಾಡಿ, ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

ಇನ್ನು ಮುಂದೆ ವಾರದಲ್ಲಿ ಒಮ್ಮೆ ವಿಶೇಷ ಕಾರ್ಯಾಚರಣೆ ಮಾಡುತ್ತೇವೆ. ಸಾರ್ವಜನಿಕರಿಗೆ ರಾತ್ರಿ ಟೈಮಲ್ಲಿ ಪೊಲೀಸರು ಇದ್ದಾರೆ ಎಂಬ ನಂಬಿಕೆ ಬರಬೇಕು. ದಾಖಲೆಗಳಿಲ್ಲದ ಸಾವಿರಕ್ಕೂ ಹೆಚ್ಚಿನ ಬೈಕ್‍ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *