ಯಡಿಯೂರಪ್ಪ ಪ್ರಮಾಣ ವಚನ – ದೇವಸ್ಥಾನಕ್ಕೆ ತೆರಳಿ ವಿಜಯದ ಕುಂಕುಮ ಧರಿಸಿದ ಅತೃಪ್ತರು

ಮುಂಬೈ: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಯಾವ ರೀತಿ ಮಂದಹಾಸ ಮೂಡಿದೆಯೋ ಅದೇ ರೀತಿ ಅತೃಪ್ತ ಶಾಸಕರಲ್ಲೂ ಮೂಡಿದ್ದು, ನಾವು ಗೆದ್ದೆವು ಎಂದು ಸಂತಸ ಪಟ್ಟಿದ್ದಾರೆ.

ಅತೃಪ್ತ ಶಾಸಕರು ಸಂಜೆ ಕೊಲ್ಲಾಪುರದ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡಿದ್ದು, ದೇವಾಲಯದಲ್ಲಿ ವಿಜಯದ ಸಂಕೇತವಾಗಿ ಕುಂಕುಮವನ್ನು ಧರಿಸಿ ಪರಸ್ಪರ ಸಂತಸ ಹಂಚಿಕೊಂಡಿದ್ದಾರೆ. ನಾವು ಅಂದುಕೊಂಡಂತೆ ಎಲ್ಲ ನಡೆದಿದ್ದು, ಯಾವುದೂ ಹುಸಿಯಾಗಿಲ್ಲ ನಾವು ಗೆದ್ದಿದ್ದೇವೆ ಎಂದು ಸಂಭ್ರಮಿಸಿದ್ದಾರೆ.

ದೇವಸ್ಥಾನಕ್ಕೆ ತೆರಳಿದ ಸಂದರ್ಭದಲ್ಲಿ ಕೇವಲ ದೇವಿಯ ದರ್ಶನ ಮಾಡಿ ಹೊರ ಬಂದಿಲ್ಲ. ದೇವಸ್ಥಾನದ ಜಗಲಿಯ ಬಳಿ ಕೂತು ಮಾತನಾಡಿಕೊಂಡು ಗಂಟೆಗಟ್ಟಲೇ ಕಾಲ ಕಳೆದಿದ್ದು, ಗೆಲವು ನಮ್ಮದೇ ಎಂದು ಹೇಳಿಕೊಂಡು ಅತೃಪ್ತ ಶಾಸಕರು ಹರಟೆ ಹೊಡೆದಿದ್ದಾರೆ. ಗೆದ್ದೇ ಗೆಲ್ಲುತ್ತೇವೆ ಇದರಲ್ಲಿ ಯಾವುದೇ ಆತಂಕ, ಸಂಶಯವಿಲ್ಲ ಎಂದು ಈ ಹಿಂದೆಯೇ ಹೇಳಿದ್ದೇವೆ ಎಂದು ಅತೃಪ್ತ ಶಾಸಕರು ತಮ್ಮ ಆಪ್ತರ ಬಳಿ ಸಂತಸ ಹಂಚಿಕೊಂಡಿದ್ದಾರೆ.

ಕೊಲ್ಲಾಪುರದ ಈ ಮಹಾಲಕ್ಷ್ಮೀ ದೇವಾಲಯ ರಮೇಶ್ ಜಾರಕಿಹೊಳಿ ಅವರ ಮನೆ ದೇವರಾಗಿದ್ದು, ಈ ದೇವಸ್ಥಾನ ಬೆಳಗಾವಿಯಿಂದ ಕೇವಲ 100 ಕಿ.ಮೀ.ದೂರದಲ್ಲಿದೆ.

ದು:ಖವೇ ಇಲ್ಲ
ಅನರ್ಹತೆ ಎನ್ನುವ ದು:ಖ ಯಾವ ಅತೃಪ್ತ ಶಾಸಕರಲ್ಲೂ ಸಹ ಕಂಡಿಲ್ಲ. ನಮ್ಮನ್ನು ಅನರ್ಹತೆಗೊಳಿಸಿದರೂ ಕೋರ್ಟ್ ನಲ್ಲಿ ನಾವು ಗೆಲ್ಲುವ ಭರವಸೆ ನಮಗಿದೆ. ಯಾವುದರ ಕುರಿತು ಸಹ ನಮಗೆ ಆತಂಕವಿಲ್ಲ. ಅನರ್ಹತೆ ಕುರಿತು ಕೋರ್ಟಿನಲ್ಲಿ ಹೇಗೆ ಗೆಲ್ಲಬೇಕೆಂದು ನಮಗೆ ತಿಳಿದಿದೆ ಎಂದು ಅತೃಪ್ತರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ಅನರ್ಹತೆ ಕುರಿತ ಅರ್ಜಿ ವಿಚಾರಣೆಗೆ ಬರಲಿದ್ದು, ನಂತರ ಎಲ್ಲರೂ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಮೇಶ್ ಜಾರಕಿಹೊಳಿ, ಪ್ರತಾಪ್‍ಗೌಡ ಪಾಟೀಲ್, ಮಹೇಶ್ ಕುಮಟಳ್ಳಿ, ಆರ್.ಶಂಕರ್ ಸೇರಿದಂತೆ ಎಲ್ಲ ಅತೃಪ್ತ ಶಾಸಕರೂ ಸಹ ದೇವಸ್ಥಾನಕ್ಕೆ ಒಟ್ಟಿಗೆ ಭೇಟಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *