ಮಂಡ್ಯ ಕೇಂದ್ರೀಯ ವಿದ್ಯಾಲಯದ ಸಮಸ್ಯೆಗಳ ಕ್ರಮಕ್ಕೆ ಕೇಂದ್ರ ಸಚಿವರಿಗೆ ಸುಮಲತಾ ಮನವಿ

ನವದೆಹಲಿ: ಮಂಡ್ಯದ ಕೇಂದ್ರೀಯ ವಿದ್ಯಾಲಯದಲ್ಲಿರುವ ಸಮಸ್ಯೆಗಳಿಗೆ ತ್ವರಿತ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದೆ ಸುಮಲತಾ ಅಂಬರೀಶ್ ಅವರು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸುಮಲತಾ ಅವರು, ಗುರುವಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರನ್ನು ಭೇಟಿಯಾಗಿ ಮಂಡ್ಯ ಕೇಂದ್ರೀಯ ವಿದ್ಯಾಲಯದಲ್ಲಿರುವ ಸಮಸ್ಯೆಗಳನ್ನು ಗಮನಕ್ಕೆ ತಂದಿರುವೆ. ಜೊತೆಗೆ ತ್ವರಿತವಾಗಿ ಶಾಲಾ ಕೊಠಡಿ, ವಸತಿ ಗೃಹ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿರುವೆ. ಸಚಿವರು ಸಹ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಸುಮಲತಾ ಅವರು ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ಮಂಡ್ಯದಲ್ಲಿನ ಹಲವು ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಕೊಡಿಸುವಂತೆ ಮನವಿ ಸಲ್ಲಿಸಿದ್ದರು. ಜೊತೆಗೆ ಅಮಿತ್ ಶಾ ಅವರನ್ನು ಭೇಟಿಯಾಗಿರುವ ಬಗ್ಗೆ ಸುಮಲತಾ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡು, ದೇಶದ ಗೃಹ ಸಚಿವರೊಂದಿಗೆ ಕ್ಷೇತ್ರದ ಹಲವಾರು ಕೆಲಸಗಳಿಗೆ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದರು.

ಮಂಡ್ಯ ಜಿಲ್ಲೆಯ ಕಡೆ ಮುಂಗಾರು ಕೈ ಕೊಟ್ಟಿದೆ. ಮಂಡ್ಯದ ರೈತರು ಕಾವೇರಿ ನೀರನ್ನೇ ಅವಲಂಬಿಸಿದ್ದಾರೆ. ಆದರೆ ಸರಿಯಾಗಿ ಮಳೆಯಾಗದ ಕಾರಣ ಕಾವೇರಿ ನದಿಯೂ ತುಂಬಿಲ್ಲ. ಇದರಿಂದ ರೈತರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಸುಮಲತಾ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿ ತಮ್ಮ ಜಿಲ್ಲೆಯ ಸಮಸ್ಯೆಯನ್ನು ಹೇಳಿಕೊಂಡಿದ್ದರು.

ಇತ್ತೀಚೆಗಷ್ಟೆ ಸುಮಲತಾ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ದಿನನಿತ್ಯ ಮೈಸೂರು- ಮಂಡ್ಯ-ಬೆಂಗಳೂರು ನಡುವೆ ಪ್ರಯಾಣಿಸುತ್ತಿರುವ ಮಹಿಳೆಯರಿಗೆ ಹೆಚ್ಚಿನ ಮಹಿಳಾ ಬೋಗಿಗಳನ್ನು ಅಳವಡಿಸುವಂತೆ ಹಾಗೂ ಹೆಚ್ಚಿನ ಪೊಲೀಸ್ ಬಂದೋಬಸ್ತುಗಳನ್ನು ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು.

ಅಷ್ಟೇ ಅಲ್ಲದೇ ಮುಂಬೈ ಮಾದರಿಯಲ್ಲಿ ವಿಶೇಷ ಮಹಿಳಾ ರೈಲನ್ನು ಬೆಳಗ್ಗೆ ಮತ್ತು ಸಂಜೆ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು. ಜೊತೆಗೆ ಕೆ.ಆರ್ ನಗರದಲ್ಲಿ ರೈಲ್ವೆ ಪೊಲೀಸ್ ಫೋರ್ಸ್ ಟ್ರೈನಿಂಗ್ ಸೆಂಟರನ್ನು ತೆರೆಯಲು ಮನವಿ ಮಾಡಿದ್ದರು.

Comments

Leave a Reply

Your email address will not be published. Required fields are marked *