ಜೆಡಿಎಸ್‍ನ ಮುಂದಿನ ನಡೆಯೇನು?

ಬೆಂಗಳೂರು: ಮೈತ್ರಿ ಸರ್ಕಾರ ಬಿದ್ದು ಹೋದ ಬೆನ್ನಲ್ಲೇ ಜೆಡಿಎಸ್ ಪಕ್ಷದಲ್ಲೀಗ ಮೌನ ಆವರಿಸಿದ್ದು, ಇಂದು ಬೆಂಗಳೂರಿನ ಜೆಪಿ ಭವನದಲ್ಲಿ ಶಾಸಕರ ಸಭೆ ನಡೆಯಲಿದೆ.

ಅನಿರೀಕ್ಷಿತವಾಗಿ ಸಿಕ್ಕ ಅಧಿಕಾರ ಅಲ್ಪಾವಧಿಗೆ ಹೋಗಿದ್ದರಿಂದ ಈಗ ಗೌಡರ ಕುಟುಂಬದ ಚಿತ್ತ ಸಹಜವಾಗಿಯೇ ಪಕ್ಷ ಸಂಘಟನೆಯತ್ತ ಹೊರಳುವ ಸಾಧ್ಯತೆ ಇದೆ. ಲೋಕಸಭಾ ಸೋಲಿನ ಬಳಿಕ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡು ಪಕ್ಷ ಬಲವರ್ಧನೆಯ ಘೋಷಣೆ ಮಾಡಿದ್ದರು.

ಆಗಸ್ಟ್ 20ರಿಂದ ನಂಜನಗೂಡಿನಿಂದ ಮೊದಲ ಹಂತದ ಪಾದಯಾತ್ರೆ ಆರಂಭವಾಗಿ ಜೆಡಿಎಸ್ ಪ್ರಾಬಲ್ಯ ಇರುವ ದಕ್ಷಿಣ ಕರ್ನಾಟಕ ಭಾಗದಲ್ಲಿ ಸಂಚರಿಸಲಿದ್ದು, ಎರಡನೇ ಹಂತದಲ್ಲಿ ಉತ್ತರ ಕರ್ನಾಟಕದಲ್ಲಿ ಸಾಗಲಿದೆ.

ಮುಂದಿನ ನಡೆಯೇನು..?
ಮೊದಲಿಗೆ ಪಕ್ಷಕ್ಕೆ ದ್ರೋಹ ಬಗೆದವರಿಗೆ ಸರಿಯಾಗಿ ಪಾಠ ಕಲಿಸಲು ದೇವೇಗೌಡರು ನಿರ್ಧಾರ ಮಾಡಿದ್ದಾರೆ. ಮೂವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ರಾಜಕೀಯ ಜೀವನ ಮುಗಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ನಂತರ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುವುದು ಅವರ ಮುಂದಿನ ಗುರಿಯಾಗಿದ್ದು, ತಾತ, ಅಪ್ಪ, ಮಗನಿಂದ ಜೆಡಿಎಸ್ ಪಾರ್ಟಿ ಉಳಿವಿಗೆ ಕೆಲಸ ಪ್ರಾರಂಭಿಸುವುದಾಗಿದೆ.

ಆಗಸ್ಟ್ ತಿಂಗಳಿಂದಲೇ ದೇವೇಗೌಡರು ಪಕ್ಷ ಸಂಘಟನೆ ಕೆಲಸ ಶುರು ಮಾಡಲಿದ್ದು, ಮೊದಲಿಗೆ ಪಾದಯಾತ್ರೆ ಮೂಲಕ ಪಕ್ಷ ಸಂಘಟನೆ ಮಾಡಲು ನಿರ್ಧರಿಸಿದ್ದಾರೆ. ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಪಾದಯಾತ್ರೆ ಪ್ಲಾನ್ ಮಾಡಿದ್ದಾರೆ. ಮುಖ್ಯವಾಗಿ ಪಕ್ಷಕ್ಕೆ ದ್ರೋಹ ಬಗೆದ ಅತೃಪ್ತರನ್ನ ಉಪ ಚುನಾವಣೆಯಲ್ಲಿ ಸೋಲಿಸುವುದು ಗೌಡರ ಕುಟುಂಬದ ಮೊದಲ ಟಾರ್ಗೆಟ್ ಆಗಿದೆ ಎಂದು ಹೇಳಲಾಗುತ್ತಿದೆ.

Comments

Leave a Reply

Your email address will not be published. Required fields are marked *