ಡ್ರಮ್‍ನಿಂದ ನಿರ್ಮಿತ ದೋಣಿಯಲ್ಲಿ ವಧುವಿನ ಬೀಳ್ಕೊಡುಗೆ

ಪಾಟ್ನಾ: ಬಿಹಾರದ ಪೂರ್ವ ಜಿಲ್ಲೆಗಳಲ್ಲಿಯ ಬಹುತೇಕ ನದಿಗಳು ತುಂಬಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪೂರ್ವ ಜಿಲ್ಲೆಯ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಹುತೇಕ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಪ್ರವಾಹದ ಪ್ರದೇಶದಲ್ಲಿ ಮದುವೆ ನಡೆದಿದ್ದು, ವಧು-ವರನನ್ನು ಪ್ಲಾಸ್ಟಿಕ್ ಡ್ರಮ್ ಗಳಿಂದ ನಿರ್ಮಿಸಿದ ದೋಣಿಯಲ್ಲಿ ಬೀಳ್ಕೊಡುಗೆ ನೀಡಲಾಗಿದೆ. ಬೀಳ್ಕೊಡುಗೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕುಶಮಹಾ ನಿವಾಸಿ ದೇವನಾರಾಯಣ್ ವಿಶ್ವಾಸ್ ಅವರ ಪುತ್ರ ಓಂನಾರಾಯಣ್ ಮದುವೆ ಕೊಚಗಾಮಾ ನಿವಾಸಿ ವಿಷ್ಣುದೇವ ಅವರ ಪುತ್ರಿಯೊಂದಿಗೆ ನಿಶ್ಚಯವಾಗಿತ್ತು. ಪ್ರವಾಹದಿಂದಾಗಿ ವಧುವಿನ ಗ್ರಾಮದ ಸುತ್ತಲೂ ನೀರು ಆವರಿಸಿದ್ದರಿಂದ ಮದುವೆ ಬಳಿಕ ಡ್ರಮ್ ಗಳಿಂದಲೇ ನಿರ್ಮಿಸಿದ ದೋಣಿಯನ್ನು ವಧುವನ್ನು ಕಳುಹಿಸಲಾಗಿದೆ.

ಇತ್ತ ಬಿಹಾರದ ಮೋತಿಹರಿ ಪ್ರದೇಶ ಸಂಪೂರ್ಣ ಜಲಾವೃಗೊಂಡಿದೆ. ಭಾನುವಾರದಂದು ಇಲ್ಲಿನ ಗೋಬ್ರಿ ಗ್ರಾಮದ ನಿವಾಸಿ ಸಬೀನ(41) ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ ಗ್ರಾಮ ಜಲಾವೃತಗೊಂಡಿದ್ದ ಕಾರಣಕ್ಕೆ ಮಹಿಳೆಯ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಪರದಾಡುತ್ತಿದ್ದರು. ಮಹಿಳೆ ಕುಟುಂಬಸ್ಥರು ಹಾಗೂ ಕೆಲ ಆಶಾ ಕಾರ್ಯಕರ್ತೆಯರ ಸಹಾಯದಿಂದ ಮಹಿಳೆಯನ್ನು ಮೋಟಾರ್ ಬೋಟ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆಯನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ಮಾಡಿದರು. ಆದರೆ ಮಾರ್ಗ ಮಧ್ಯೆ ಹೆರಿಗೆ ನೋವು ಹೆಚ್ಚಾಗಿದ್ದು, ಎನ್‍ಡಿಆರ್‍ಎಫ್ ಸಿಬ್ಬಂದಿ ಬೋಟ್‍ನಲ್ಲೇ ಹೆರಿಗೆ ಮಾಡಿಸಲು ನಿರ್ಧರಿಸಿದರು.

ಈ ವೇಳೆ ಎನ್‍ಡಿಆರ್‍ಎಫ್ ನರ್ಸಿಂಗ್ ಸಹಾಯಕ ರಾಣಾ ಪ್ರತಾಪ್ ಯಾಧವ್ ಅವರು ಬೋಟ್‍ನಲ್ಲಿ ಇದ್ದರು. ಹೀಗಾಗಿ ಅವರ ಮಾರ್ಗದರ್ಶನ ಪಡೆದು ಎನ್‍ಡಿಆರ್‍ಎಫ್ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿ ಸಬೀನ ಅವರಿಗೆ ಹೆರಿಗೆ ಮಾಡಿಸಿದ್ದಾರೆ.

Comments

Leave a Reply

Your email address will not be published. Required fields are marked *