ಸಂತ್ರಸ್ತರನ್ನು ತಬ್ಬಿಕೊಂಡು ಸಾಂತ್ವನ ಹೇಳಿದ ಪ್ರಿಯಾಂಕ ಗಾಂಧಿ: ವಿಡಿಯೋ

– ಕಾಂಗ್ರೆಸ್‍ನಿಂದ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ

ಲಕ್ನೋ: ಜಮೀನು ವಿವಾದದ ಗಲಾಟೆಯಲ್ಲಿ ಸಾವನ್ನಪ್ಪಿದ 10 ಜನರ ಕುಟುಂಬದ ಸದಸ್ಯರಿಗೆ ಉತ್ತರ ಪ್ರದೇಶದ ಪೂರ್ವ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ ಗಾಂಧಿ ಸಾಂತ್ವನ ಹೇಳಿದ್ದಾರೆ.

ಉತ್ತರ ಪ್ರದೇಶದ ಸೋನ್‍ಭದ್ರಾ ಎಂಬಲ್ಲಿ ಜಮೀನು ವಿದಾದ ಗಲಾಟೆಯಲ್ಲಿ ಗ್ರಾಮದ ಮುಖ್ಯಸ್ಥನಾಗಿದ್ದ ಯಾಗ್ಯ ದತ್ ಬೆಂಬಲಿಗರು ಆದಿವಾಸಿ ಕುಟುಂಬಗಳ ಮೇಲೆ ಗುಂಡು ಹಾರಿಸಿದ್ದರು. ಗುಂಡೇಟಿಗೆ 10 ಜನರು ಮೃತಪಟ್ಟಿದ್ದು, 19 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಪ್ರದೇಶದ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಸಂತ್ರಸ್ತರನ್ನು ಭೇಟಿಯಾಗಲು ಶುಕ್ರವಾರ ಬಂದಿದ್ದ ಪ್ರಿಯಾಂಕ ಗಾಂಧಿ ಅವರನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದರು.

ಮೃತ ಕುಟುಂಬದ 15 ಜನ ಸದಸ್ಯರು ಪ್ರಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಲು ಬಂದಿದ್ದರು. ಆದರೆ ಪೊಲೀಸರು ಅವರನ್ನು ತಡೆದಿದ್ದರು. ಹೀಗಾಗಿ ಪ್ರಿಯಾಂಕ ಗಾಂಧಿ ಅವರು ಸಂತ್ರಸ್ತರನ್ನು ಭೇಟಿಯಾಗಬೇಕು ಎಂದು ಪಟ್ಟು ಹಿಡಿದು, ಶನಿವಾರವೂ ಧರಣಿ ನಡೆಸಿದರು. ಇದಕ್ಕೆ ಮಣಿದ ಪೊಲೀಸರು ಭೇಟಿಗೆ ಅವಕಾಶ ಮಾಡಿಕೊಟ್ಟರು.

ಸಂತ್ರಸ್ತರನ್ನು ಭೇಟಿಯಾಗದೇ ಹಿಂತಿರುಗುವ ಮಾತೇ ಇಲ್ಲ. ಅಧಿಕಾರಿಗಳು ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಸ್ವಲ್ಪ ಸಮಯದ ನಂತರ ಧರಣಿ ಸ್ಥಳಕ್ಕೆ ಸಂತ್ರಸ್ತ ಪುರುಷರು ಹಾಗೂ ಮಹಿಳೆಯರು ಆಗಮಿಸಿದರು. ಪಕ್ಕದಲ್ಲಿ ಕುಳಿತು ಕಣ್ಣೀರು ಹಾಕುತ್ತಿದ್ದ ಮಹಿಳೆಯರನ್ನು ಪ್ರಿಯಾಂಕ ಗಾಂಧಿ ಅವರು ಅಪ್ಪಿಕೊಂಡು ಸಾಂತ್ವನ ಹೇಳಿದ್ದಾರೆ.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನಿನ್ನೂ ಬಂಧನದಲ್ಲಿ ಇದ್ದೇನೆಯೇ? ಆಡಳಿತ ಏನು ಹೇಳುತ್ತದೆ ಎಂದು ರಾಜ್ಯ ಸರ್ಕಾರವನ್ನು ಕುಟುಕಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷದಿಂದ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಏನಿದು ಪ್ರಕರಣ?:
ಯಾಗ್ಯ ದತ್ ಉಭಾ ಗ್ರಾಮದ ಸಮೀಪದ ಘೋರ್‍ವಾಲ್‍ನಲ್ಲಿ ಎರಡು ವರ್ಷಗಳ ಹಿಂದೆ 36 ಎಕರೆ ಕೃಷಿ ಭೂಮಿಯನ್ನು ಖರೀದಿಸಿದ್ದ. ಆದರೆ ಯಾಗ್ಯ ದತ್ ತನ್ನ ಸಹವರ್ತಿಗಳ ಜೊತೆಗೆ ಬುಧವಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೋಗಿದ್ದ. ಇದಕ್ಕೆ ಗ್ರಾಮಸ್ಥರು ಭಾರೀ ವಿರೋಧಿಸಿದ್ದರು. ಇದರಿಂದಾಗಿ ಗಲಾಟೆ ಆರಂಭವಾಗುತ್ತಿದ್ದಂತೆ ಯಾಗ್ಯ ದತ್ ಕಡೆಯ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡು ತಗುಲಿ 10 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 19 ಜನರ ಸ್ಥಿತಿ ಗಂಭೀರವಾಗಿದೆ.

ಈ ಕೃತ್ಯದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡ ಘಟನೆಯನ್ನು ಖಂಡಿಸಿದ್ದು, ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ 19 ಜನರಿಗೆ ಅಗತ್ಯ ವೈದ್ಯಕೀಯ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಆದೇಶ ಹೊರಡಿಸಿದ್ದಾರೆ.

Comments

Leave a Reply

Your email address will not be published. Required fields are marked *