ಆರೋಪಿಯ ಕಿರುಕುಳಕ್ಕೆ ಬೇಸತ್ತು ಮಧು ಪತ್ತಾರ್ ಆತ್ಮಹತ್ಯೆ – ಸಿಐಡಿಯಿಂದ ಚಾರ್ಜ್ ಶೀಟ್ ಸಲ್ಲಿಕೆ

ರಾಯಚೂರು: ಭಾರೀ ಸಂಚಲನ ಮೂಡಿಸಿದ್ದ ರಾಯಚೂರು ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವು ಪ್ರಕರಣದಲ್ಲಿ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಆರೋಪಿ ಸುದರ್ಶನ್ ಯಾದವ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಆರೋಪಿ ಯುವತಿಗೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದಾನೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಸುಮಾರು ಒಂದು ಸಾವಿರ ಪುಟಗಳ ದೋಷಾರೋಪಣೆ ಪಟ್ಟಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ, ಕಿರುಕುಳ, ಅಡ್ಡಗಟ್ಟಿ ಹಲ್ಲೆ ಮಾಡಿದ್ದ ಎಂದು ಆರೋಪಗಳಿವೆ. ಸುಮಾರು 60 ಸಾಕ್ಷಿ, 45 ದಾಖಲೆಗಳನ್ನ ರಾಯಚೂರಿನ 3 ನೇ ಹೆಚ್ಚುವರಿ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಸಿಐಡಿ ಪೊಲೀಸರು ಸಲ್ಲಿಸಿದ್ದಾರೆ.

ವಿದ್ಯಾರ್ಥಿನಿ ಶವ ಕೆಲದಿನಗಳಾದ ಮೇಲೆ ಪತ್ತೆಯಾದ ಹಿನ್ನೆಲೆ ಕಪ್ಪುಬಣ್ಣಕ್ಕೆ ತಿರುಗಿದೆ, ಯಾವುದೇ ಸುಟ್ಟಗಾಯಗಳಿಲ್ಲದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ ಎನ್ನುವ ಮಾಹಿತಿಯನ್ನ ಸಿಐಡಿ ನ್ಯಾಯಾಲಯಕ್ಕೆ ನೀಡಿದೆ. ಆರೋಪಿ ಸುದರ್ಶನ್ ಕಳೆದ 90 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಪಿಯುಸಿಯಲ್ಲಿ ಸಹಪಾಠಿಯಾಗಿದ್ದ ಮಧು ಹಾಗೂ ಸುದರ್ಶನ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ ಮಧು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಕೆಲ ತಿಂಗಳಿಂದ ಸುದರ್ಶನ್ ಮಧು ನಡವಳಿಕೆ ಬಗ್ಗೆ ಸಂಶಯಪಟ್ಟು ಕಿರುಕುಳ ಕೊಡುತ್ತಿದ್ದನು. ಇದರಿಂದ ವಿದ್ಯಾರ್ಥಿನಿ ನೊಂದಿದ್ದಳು. ಹೀಗಾಗಿ ಆರೋಪಿಯಿಂದ ಮಧು ಅಂತರ ಕಾಯ್ದುಕೊಂಡಿದ್ದಳು.

ಕಳೆದ ಏ.13ರಂದು ಮಧು ಮನೆಯಿಂದ ಕಾಲೇಜಿಗೆ ತೆರಳುತ್ತಿದ್ದಾಗ ದಾರಿ ಮಧ್ಯೆ ಸುದರ್ಶನ್ ಆಕೆಯ ಜೊತೆ ಜಗಳವಾಡಿದ್ದನು. ಆಗ ಸಾರ್ವಜನಿಕರು ಜಗಳ ಬಿಡಿಸಿ ಕಳುಹಿಸಿದ್ದರು. ಆ ಬಳಿಕ ಅಲ್ಲಿಂದ ಮಧು ನೇರವಾಗಿ ತಾನು ಓದುತ್ತಿದ್ದ ನವೋದಯ ಕಾಲೇಜಿನ ಆವರಣಕ್ಕೆ ಹೋಗಿದ್ದಳು. ಆದರೆ ಮಧುವನ್ನು ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿ ಕಾಲೇಜಿನ ಆವರಣದ ಪಾರ್ಕಿಂಗ್‍ನಲ್ಲಿ ಆಕೆಯ ದ್ವಿಚಕ್ರ ವಾಹನದ ಕೀ ಮತ್ತು ಮೊಬೈಲ್ ಕಸಿದುಕೊಂಡಿದ್ದನು. ನೀನು ನನ್ನನ್ನೇ ಪ್ರೀತಿಸಬೇಕು, ಇಲ್ಲದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿದ್ದನು. ಸುದರ್ಶನ್ ಕಿರುಕುಳದಿಂದ ಬೇಸತ್ತ ಮಧು ನೇರವಾಗಿ ಕಾಲೇಜು ಆವರಣದಿಂದ ನಿರ್ಜನ ಪ್ರದೇಶಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

Comments

Leave a Reply

Your email address will not be published. Required fields are marked *