ಸಂಸತ್ ಕಲಾಪಕ್ಕೆ ಗೈರಾದವರ ವಿರುದ್ಧ ಮೋದಿ ಕೆಂಡಾಮಂಡಲ, ಪಟ್ಟಿ ನೀಡುವಂತೆ ಸೂಚನೆ

ನವದೆಹಲಿ: ಸಂಸತ್ ಕಲಾಪಕ್ಕೆ ಗೈರಾದ ಸಚಿವರು ಹಾಗೂ ಸಂಸದ ವಿರುದ್ಧ ಪ್ರಧಾನಿ ಮೋದಿ ಕೆಂಡಾಮಂಡಲರಾಗಿದ್ದು, ಸಂಸತ್ ಕಲಾಪಕ್ಕೆ ಗೈರಾದವರ ಪಟ್ಟಿಯನ್ನು ಸಂಜೆಯೊಳಗೆ ನೀಡುವಂತೆ ಸೂಚಿಸಿದ್ದಾರೆ.

ಬಿಜೆಪಿ ಸಂಸದೀಯ ಪಕ್ಷದ ವಾರದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಸಂಸತ್‍ಗೆ ಹಾಜರಾಗಿಯೂ ಕಲಾಪಕ್ಕೆ ಗೈರಾದವರ ಪಟ್ಟಿಯನ್ನು ಸಿದ್ಧಪಡಿಸುವಂತೆ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಸೂಚಿಸಿದ್ದಾರೆ.

ಪ್ರಧಾನಿ ಮೋದಿ ಅವರು ಈ ಹಿಂದೆಯೇ ತಮ್ಮ ಸಂಸದರಿಗೆ ಈ ಕುರಿತು ಸಲಹೆ ನೀಡಿದ್ದರು. ಇದೀಗ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿಯೂ ಸಹ ಎಚ್ಚರಿಕೆ ನೀಡಿದ್ದು, ರಾಜಕಾರಣವನ್ನು ಮೀರಿ ಕೆಲಸ ಮಾಡುವ ಕುರಿತು ಸಲಹೆ ನೀಡಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ನೀರಿನ ಸಮಸ್ಯೆ ಒತ್ತು ನೀಡಿ, ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿ. ನಿಮ್ಮ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜನರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಿ, ಪ್ರತಿ ದಿನ ನಿಮ್ಮ ಕಚೇರಿಯಲ್ಲಿ ಕುಳಿತು ಅಧಿಕಾರಿಗಳೊಂದಿಗೆ ಕ್ಷೇತ್ರದ ಸಮಸ್ಯೆಗಳ ಕುರಿತು ಚರ್ಚಿಸಿ ಎಂದು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.

ಸಂಸದರು ಕಡ್ಡಾಯವಾಗಿ ನಿಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಕೆಲವು ವಿಶಿಷ್ಟ ಕೆಲಸಗಳನ್ನು ಮಾಡಬೇಕು. ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ ಎಂದು ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಕುಟುಕಿದ್ದಾರೆ.

ಕ್ಷಯ ಮತ್ತು ಕುಷ್ಠರೋಗವನ್ನು ತಡೆಗಟ್ಟಲು ಮಿಷನ್ ಮೋಡ್‍ನಲ್ಲಿ ಸಂಸದರು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ. ಈ ಹಿಂದೆಯೂ ಸಹ ಪ್ರಧಾನಿ ಮೋದಿ ಅವರು ಸಂಸತ್ ಕಲಾಪಕ್ಕೆ ಗೈರಾಗುವ ಸಂಸದರನ್ನು ತರಾಟೆ ತೆಗೆದುಕೊಂಡಿದ್ದರು. ಆದರೂ ಸಂಸದರು ಕಲಾಪಕ್ಕೆ ಗೈರಾಗಿದ್ದಾರೆ. ಹೀಗಾಗಿ ಮೋದಿ ಗೈರಾದವರ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ.

ಇತ್ತೀಚೆಗೆ ಅಧಿಕಾರಿ ಮೇಲೆ ಬ್ಯಾಟ್‍ನಿಂದ ಹಲ್ಲೆ ಮಾಡಿದ್ದ ಶಾಸಕ ಆಕಾಶ್ ವಿಜಯ್‍ವರ್ಗಿಯಾ ಅವರ ಗೂಂಡಾ ವರ್ತನೆಯನ್ನು ಉದಾಹರಣೆಯಾಗಿ ನೀಡಿ ತರಾಟೆಗೆ ತೆಗೆದುಕೊಂಡಿದ್ದರು. ಇದು ಯಾವ ರೀತಿಯ ವರ್ತನೆ, ಭಾಷೆಯ ಬಳಕೆ ಎಂಥಹದ್ದು, ಜನಪ್ರತಿನಿಧಿಗಳಾದವರು ಹೇಗಿರಬೇಕು ಎಂದು ಸಂಸದರಿಗೆ ಮೋದಿ ಕ್ಲಾಸ್ ತೆಗೆದುಕೊಂಡಿದ್ದರು. ಇಂತಹವರನ್ನು ಯಾವುದೇ ಮುಲಾಜಿಲ್ಲದೆ, ಯಾವ ನಾಯಕರ ಮಗನೆಂದೂ ನೋಡದೆ ಪಕ್ಷದಿಂದ ಹೊರಗೆ ಹಾಕಿ ಎಂದು ಗುಡುಗಿದ್ದರು.

Comments

Leave a Reply

Your email address will not be published. Required fields are marked *