ಪೊರೆ ಚಿಕಿತ್ಸೆ ಬಳಿಕ 15 ರೋಗಿಗಳ ಕಣ್ಣಿಗೆ ಕುತ್ತು

– ಮಿಂಟೋ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ
– ಡ್ರಗ್ ಓವರ್ ರಿಯಾಕ್ಷನಿಂದ ಮೃತಪಟ್ಟಿರಬಹುದು
– ಈ ಪ್ರಕರಣದಲ್ಲಿ ನಮ್ಮ ತಪ್ಪಿಲ್ಲ- ವೈದ್ಯರಿಂದ ಸ್ಪಷ್ಟನೆ

ಬೆಂಗಳೂರು: ಕಣ್ಣಿನ ಪೊರೆ ಚಿಕಿತ್ಸೆ ಬಳಿಕ 15 ರೋಗಿಗಳು ಕಣ್ಣು ಕಳೆದುಕೊಂಡಿರುವ ಘಟನೆ ನಗರದ ಮಿಂಟೋ ಆಸ್ಪತ್ರೆಯಲ್ಲಿ ನಡೆದಿದೆ.

ಕಳೆದ ಮಂಗಳವಾರ 25 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿತ್ತು. ಅದರಲ್ಲಿ 15 ಜನರಿಗೆ ಕಣ್ಣು ಕಾಣುತ್ತಿಲ್ಲ, 5 ಮಂದಿಗೆ ಸ್ವಲ್ಪ ಚೇತರಿಕೆ ಕಂಡಿದೆ. ಇದಕ್ಕೆಲ್ಲ ವೈದ್ಯರ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.

ಡ್ರಗ್ಸ್ ರಿಯಾಕ್ಷನ್‍ನಿಂದ ಈ ದುರ್ಘಟನೆ ಸಂಭವಿಸಿದೆ. ನಮಗೂ ಇದಕ್ಕೂ ಸಂಬಂಧವಿಲ್ಲ, ನಮ್ಮ ಕೆಲಸ ನಾವು ಮಾಡಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ. ಇತ್ತ ರೋಗಿಗಳ ಸಂಬಂಧಿಕರು ಆಸ್ಪತ್ರೆ ಮುಂದೆ ಗೋಗರೆಯುತ್ತಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ವೈದ್ಯರು ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ರೋಗಿಗಳು ಪ್ರತಿಭಟಿಸುತ್ತಾರೆ ಎಂಬುದನ್ನು ಮನಗಂಡು ರೋಗಿಗಳನ್ನು ಮನೆಗೆ ಹೊರಡಿ ಎಂದು ಒತ್ತಡ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟು 25 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಎಲ್ಲರ ಬಳಿಯೂ ವೈದ್ಯರು 8 ಸಾವಿರ ರೂ. ಹಣ ಪಡೆದಿದ್ದರು. ಗೋಳಾಡುತ್ತಿರುವ ರೋಗಿಗಳಿಗೆ ಡ್ರಗ್ ರಿಯಾಕ್ಷನ್ ಆಗಿದೆ ಎಂಬುದನ್ನು ಹೊರತು ಪಡಿಸಿದರೆ, ಕಣ್ಣು ಸರಿ ಹೋಗುವ ಕುರಿತು ವೈದ್ಯರು ಭರವಸೆ ನೀಡುತ್ತಿಲ್ಲ. ಶಸ್ತ್ರಚಿಕಿತ್ಸೆಗೆ ನೀವು ಸಹಿ ಹಾಕಿದ್ದೀರ, ಇದಕ್ಕೆ ನಾವು ಕಾರಣರಲ್ಲ ಎಂದು ವೈದ್ಯರು ದೂರುತ್ತಿದ್ದಾರೆ.

ರೋಗಿಗಳಿಗೆ ನೀಡಲಾದ ಡ್ರಗ್ಸ್ ಪರೀಕ್ಷೆ ಮಾಡಲು ಲ್ಯಾಬ್‍ಗೆ ಕಳುಹಿಸಲಾಗಿದೆ. ಅಲ್ಲದೆ, ಮೇಲಾಧಿಕಾರಿಗಳಿಗೂ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

ಅವಾಂತರದ ಕುರಿತು ಮಿಂಟೊ ಆಸ್ಪತ್ರೆ ನಿರ್ದೇಶಕಿ ಸುಜಾತ ರಾಥೋಡ್ ಪ್ರತಿಕ್ರಿಯಿಸಿ, ರೋಗಿಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದಾಗ ನಾನು ರಜೆಯಲ್ಲಿದ್ದೆ. ನಮ್ಮ ಸರ್ಜಿಕಲ್ ಟೀಮ್ ಚಿಕಿತ್ಸೆ ನೀಡಿದೆ. ಸೋಮವಾರ 24ಕ್ಕೂ ರೋಗಿಗಳಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿದ್ದು, ಮಂಗಳವಾರ ಬೆಳಗ್ಗೆ ರೋಗಿಗಳ ಕಣ್ಣಿನ ಪಟ್ಟಿ ಬಿಚ್ಚಿದಾಗ ರಿಯಾಕ್ಷನ್ ಆಗಿರುವುದು ಕಂಡಬಂದಿದೆ. ಮೇಲ್ನೋಟಕ್ಕೆ ಹೈ ಡ್ರಗ್ ರಿಯಾಕ್ಷನ್‍ನಿಂದ ಅವಾಂತರ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಮಗೆ ಆಪರೇಷನ್ ಮಾಡಲು ಡ್ರಗ್ ಸರ್ಕಾರದಿಂದ ಬರುತ್ತದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ಈಗಾಗಲೇ ತಂದಿದ್ದು, ಡ್ರಗ್‍ನ್ನು ವಶಕ್ಕೆ ಪಡೆಯಲಾಗಿದೆ. ಮೆಡಿಸಿನ್‍ಗಳನ್ನೂ ಲ್ಯಾಬ್‍ಗೆ ಕಳುಹಿಸಿದ್ದು, ಇನ್ನು ವರದಿ ಬಂದಿಲ್ಲ. ವರದಿ ಬಂದ ನಂತರ ಮುಂದಿನ ಚಿಕಿತ್ಸೆ ನೀಡುತ್ತೇವೆ. ಒಂದು ವೇಳೆ ಕಣ್ಣು ಬಂದಿಲ್ಲ ಎಂದರೆ ನಾವು ಜವಾಬ್ದಾರರಲ್ಲ. ಇದರಲ್ಲಿ ವೈದ್ಯರ ತಪ್ಪಿಲ್ಲ. ನಾವು ನಮ್ಮ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *