ಉದ್ಯಮ ಪಾಲುದಾರರಿಂದ 4.5 ಕೋಟಿ ವಂಚನೆ – ಸೆಹ್ವಾಗ್ ಪತ್ನಿ ಆರತಿ ದೂರು

ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪತ್ನಿ ಆರತಿ ಸೆಹ್ವಾಗ್ ಅವರು ತಮ್ಮ ಉದ್ಯಮ ಪಾಲುದಾರರ ವಿರುದ್ಧ ದೂರು ನೀಡಿದ್ದು, 4.5 ಕೋಟಿ ರೂ. ಸಾಲ ಪಡೆಯಲು ನಕಲು ಸಹಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಅಂದಹಾಗೇ ಆರತಿ ಅವರು ಕೃಷಿ ಆಧಾರಿತ ಕಂಪನಿಯಲ್ಲಿ ಪಾಲುದಾರರಾಗಿದ್ದು, ಸಂಸ್ಥೆಯ ಇತರೇ ಪಾಲುದಾರರು ತಮ್ಮ ಅರಿವಿಗೆ ಬಾರದೆಯೇ ತಮ್ಮ ಸಹಿಯನ್ನು ನಕಲು ಮಾಡಿದ್ದಾರೆ. ಆ ಮೂಲಕ 4.5 ಕೋಟಿ ರೂ. ಸಾಲ ಪಡೆದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಸಾಲ ಪಡೆಯಲು ತಮ್ಮ ಪತಿ ಸೆಹ್ವಾಗ್ ಅವರ ಹೆಸರನ್ನು ಇಬ್ಬರು ಆರೋಪಿಗಳು ಬಳಸಿಕೊಂಡಿದ್ದಾರೆ. ಸಾಲ ನೀಡಿದವರಿಗೆ ಎರಡು ಪೋಸ್ಟ್ ಡೇಟೆಡ್ ಚೆಕ್ ನೀಡಿದ್ದಾರೆ. ಆದರೆ ಅವರು ಸಾಲ ಮರು ಪಾವತಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ವಿವರಿಸಿದ್ದಾರೆ.

ಸಾಲ ಪಡೆದು ಮರುಪಾವತಿ ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಸಾಲಗಾರರು ಕೋರ್ಟಿಗೆ ಅರ್ಜಿ ಸಲ್ಲಿದ್ದು, ಈ ವೇಳೆ ವಿಚಾರ ತಿಳಿದು ಬಂದಿದೆ. ಆದರೆ ಎಂದೂ ನಾನು ಅವರಿಗೆ ಯಾವುದೇ ದಾಖಲೆ ಮೇಲೆ ಸಹಿ, ಒಪ್ಪಂದ ಮಾಡಿಕೊಂಡಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಆರತಿಯವರ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ), 468 (ನಕಲಿ ದಾಖಲೆ ಸೃಷ್ಟಿಸಿ ವಂಚನೆ), 471 (ಫೋರ್ಜರಿ) ಮತ್ತು 34ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *