ಮುಂಬೈ ಜನ ವೋಟ್ ಹಾಕಿದ್ರಾ ಅಲ್ಲಿ ಹೋಗಿ ಕೂರಕ್ಕೆ – ನಾರಾಯಣಗೌಡರ ವಿರುದ್ಧ ರೈತನ ಆಕ್ರೋಶ

ಮಂಡ್ಯ: ಶಾಸಕ ನಾರಾಯಣಗೌಡರನ್ನು ಕರೆದುಕೊಂಡು ಬಂದು ಕೆ.ಆರ್.ಪೇಟೆಗೆ ತಂದು ಬಿಟ್ಟು ಬಿಡಿ ಎಂದು ಜಮೀನಿನ ಬಳಿ ನಿಂತು ಮಾತನಾಡಿರುವ ರೈತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಾರಾಯಣಗೌಡ ಎಲ್ಲಿದ್ದಾರೆ ಎಂದು ಹುಡುಕಿಕೊಡಿ ಸಾಕು. ಅವರು ಏನೂ ರಾಜಕೀಯ ಮಾಡುವುದು ಬೇಡ. ಪಾಪಾ ಅವರ ಹೆಂಡತಿ ಮತ್ತು ಮಕ್ಕಳು ಅವರನ್ನು ಹುಡುಕುತ್ತಿದ್ದಾರೆ. ಇವರನ್ನು ಮುಂಬೈ ಜನ ವೋಟ್ ಹಾಕಿ ವಿಧಾನಸೌಧಕ್ಕೆ ಕಳುಹಿಸಿದ್ದಾರ ಅಥವಾ ಮಂಡ್ಯ ಜನ ವೋಟ್ ಹಾಕಿ ವಿಧಾನಸೌಧಕ್ಕೆ ಕಳುಹಿಸಿದ್ದಾರ ಎಂದು ರೈತ ಪ್ರಶ್ನೆ ಮಾಡಿದ್ದಾನೆ.

ಕುಮಾರಸ್ವಾಮಿ ಇವರಿಗೆ ಅನ್ಯಾಯ ಮಾಡಿದ್ದರೆ ನಮ್ಮ ಬಳಿ ಬಂದು ಹೇಳಬೇಕಿತ್ತು. ಮಂಡ್ಯ ಅಂದರೆ ಸಾಕು ಕುಮಾರಸ್ವಾಮಿ ಸ್ಪಂದಿಸುತ್ತಿದ್ದರು. ನಾವು ಯಾವತ್ತಾದರೂ ಊಟ ಇಲ್ಲ, ಕುಡಿಯುವುದಕ್ಕೆ ನೀರಿಲ್ಲ ಎಂದು ನಾರಾಯಣಗೌಡರ ಮನೆ ಹತ್ತಿರ ಹೋಗಿದ್ದೇವಾ? ನಾನು ಬೇರೆಯವರಿಗೆ ವೋಟ್ ಹಾಕಿಲ್ಲ. ಅವರ ಬಗ್ಗೆ ನಾನು ಕೇಳಲ್ಲ. ನಾರಾಯಣಗೌಡರಿಗೆ ವೋಟ್ ಹಾಕಿದ್ದೇನೆ ಕೇಳುತ್ತೇನೆ ಎಂದು ರೈತ ನಾರಾಯಣಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುಡ್ಡು ಮಾಡಿಕೊಳ್ಳಲು ಮುಂಬೈಗೆ ಹೋಗಿದ್ದಾರೆ. ಅವರನ್ನು ಮೊದಲು ಮಂಡ್ಯ ಜಿಲ್ಲೆಗೆ ಕರೆಸಿಕೊಡಿ. ವೋಟ್ ಹಾಕುವಾಗ ಮತದಾರರಲ್ಲಿ ಮನವಿ ಅಂತಾರೆ, ಈಗ ರಾಜೀನಾಮೆ ಕೊಡಲು ಮಾತ್ರ ನಮ್ಮನ್ನ ಏನೂ ಕೇಳುತ್ತಿಲ್ಲ. ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರ ರಾಜೀನಾಮೆಯನ್ನು ಅಂಗೀಕಾರ ಮಾಡಬೇಡಿ. ಅವರು ಮುಂದೆ 10 ವರ್ಷ ಚುನಾವಣೆಗೆ ನಿಲ್ಲಬಾರದು ಆ ರೀತಿ ಕಾನೂನು ಮಾಡಿ ಎಂದು ಮಾನ್ಯ ರಾಜ್ಯಪಾಲರು ಮತ್ತು ಸ್ಪೀಕರ್ ಅವರಲ್ಲಿ ಕೈ ಮುಗಿದು ರೈತ ಮನವಿ ಮಾಡಿಕೊಂಡಿದ್ದಾನೆ.

Comments

Leave a Reply

Your email address will not be published. Required fields are marked *