ನಮ್ಮಲ್ಲಿದ್ದ ‘ಬ್ಲ್ಯಾಕ್ ಶಿಪ್’ಗಳೆಲ್ಲಾ ಹೋಗಿವೆ – ಅತೃಪ್ತರ ವಿರುದ್ಧ ಸಿದ್ದು ಕಿಡಿ

ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಲು ಸಿಎಂ ಕುಮಾರಸ್ವಾಮಿ ಸೇರಿದಂತೆ, ಸಚಿವ ಡಿಕೆ ಶಿವಕುಮಾರ್ ಪ್ರಯತ್ನ ನಡೆಸುತ್ತಿದ್ದರೆ ಇತ್ತ ಸಿದ್ದರಾಮಯ್ಯ ಅವರು ಅತೃಪ್ತ ಶಾಸಕರನ್ನು ಬ್ಲ್ಯಾಕ್ ಶಿಪ್ ಎಂದು ಕರೆದು ಕಟು ಟೀಕೆ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಶಾಸಕರ ಅನರ್ಹತೆ ಕುರಿತ ಬಗ್ಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಈಗಾಗಲೇ ಸ್ಪೀಕರ್ ಅವರಿಗೆ ದೂರು ನೀಡಿದ್ದೇವೆ. ಅವರು ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು.

ವಿಶ್ವಾಸಮಂಡನೆ ವಿಚಾರವನ್ನು ಸಿಎಂ ಅವರೇ ನಮಗೆ ತಿಳಿಸಿದ್ದರು. ನಮಗೇ ವಿಶ್ವಾಸ ಇರುವ ಕಾರಣಕ್ಕೆ ವಿಶ್ವಾಸಮತ ಯಾಚಿಸುತ್ತಿದ್ದೇವೆ. ಅದು ಹೇಗೆ ಆಗುತ್ತೆ ಎಂಬುವುದನ್ನು ಹೇಳಲು ಆಗುವುದಿಲ್ಲ ಎಂದರು. ಅಲ್ಲದೇ ರೆಸಾರ್ಟ್‍ಗೆ ತೆರಳುವ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಈ ಬಗ್ಗೆ ಬಿಜೆಪಿ ಅವರಿಗೆ ಭಯವಿದ್ದು, ಆ ಪಕ್ಷದಲ್ಲೂ ಕೆಲ ಬ್ಲ್ಯಾಕ್ ಶಿಪ್ ಗಳಿವೆ. ಆದ್ದರಿಂದಲೇ ನಮಗಿಂತ ಮುನ್ನವೇ ಅವರು ರೆಸಾರ್ಟಿಗೆ ತೆರಳಿದ್ದಾರೆ. ಯಡಿಯೂರಪ್ಪನೇ ಬೇರೆ ಸಿದ್ದರಾಮಯ್ಯನೇ ಬೇರೆ, ಎಂಟಿಬಿ ನಾಗರಾಜ್ ಎದೆಯಲ್ಲಿ ನಾನಿದ್ದೀನೋ ಇಲ್ಲವೋ ಅನ್ನೊಂದು ಗೊತ್ತಿಲ್ಲ. ಎದೆ ಬಗೆಯೋಕೆ ಆಗಲ್ಲ ಅಲ್ವಾ? ಇದ್ದಿನೋ ಇಲ್ವಾ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ನಮ್ಮ ಶಾಸಕರು ಕೆಲವರು ರೆಸಾರ್ಟಿಗೆ ಹೋಗಲು ಹೇಳಿದ್ದಾರೆ. ಈ ಬಗ್ಗೆ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಇತ್ತ ಸಿಎಂ ಹಾಗೂ ಸಚಿವ ಡಿಕೆ ಶಿವಕುಮಾರ್ ಅವರು ಅತೃಪ್ತ ಶಾಸಕರ ಮನವೊಲಿಕೆ ಮಾಡಲು ಹರಸಾಹಸಪಡುತ್ತಿದ್ದರೆ ಇತ್ತ ಸಿದ್ದರಾಮಯ್ಯ ಅವರು ಟೀಕೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಅವರ ಆಪ್ತರೇ ರಾಜೀನಾಮೆ ನೀಡಿರುವುದರಿಂದ ಹಲವು ಆರೋಪಗಳು ಕೇಳಿ ಬಂದಿದೆ. ಈಗ ಅತೃಪ್ತರ ವಿರುದ್ಧವೇ ಟೀಕೆ ಮಾಡಿದ್ದು ಅವರನ್ನು ಮರಳಿ ಪಕ್ಷಕ್ಕೆ ಕರೆ ತರುವ ಕೆಲಸಕ್ಕೆ ಹಿನ್ನಡೆಯಾಗಿದೆ.

Comments

Leave a Reply

Your email address will not be published. Required fields are marked *