ಮಹೇಶ್ ಜೊತೆಗಿನ ಭೇಟಿಗೆ ವಿಶೇಷ ಅರ್ಥ ಬೇಡ- ಬಿಎಸ್‍ವೈ

ಬೆಂಗಳೂರು: ಸಚಿವ ಸಾ.ರಾ ಮಹೇಶ್ ಹಾಗೂ ಬಿಜೆಪಿ ಮುಖಂಡರ ಭೇಟಿಗೆ ಹೊಸ ಅರ್ಥ ಬೇಡ. ಅವರ ಜೊತೆ ಸರ್ಕಾರ ನಡೆಸೋಕೆ ಆಗುತ್ತೇನ್ರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗರಂ ಆಗಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‍ವೈ, ಸಾ.ರಾ ಮಹೇಶ್ ಹಾಗೂ ಬಿಜೆಪಿ ಮುಖಂಡ ಭೇಟಿಗೆ ಹೊಸ ಅರ್ಥ ನೀಡುವುದು ಬೇಡ. ಜೆಡಿಎಸ್ ಜೊತೆ ಸರ್ಕಾರ ನಡೆಸೋಕೆ ಆಗುತ್ತೇನ್ರಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ದಾರೆ. ಅಲ್ಲದೆ ಈ ಹಿಂದೆ ನೂರು ಬಾರಿ ನಾವು ಜೆಡಿಎಸ್ ಜೊತೆ ಸರ್ಕಾರ ಮಾಡಿ ಸೋತು ಹೋಗಿದ್ದೇವೆ ಎಂದು ಹೇಳಿದ್ದೇವೆ. ಇನ್ನು ಸಾಧ್ಯವಿಲ್ಲ. ಅವರಿಬ್ಬರ ಭೇಟಿ ಆಕಸ್ಮಿಕ ಅಷ್ಟೇ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ನಮ್ಮ ಗಮನ ಇದೆ. ಸೋಮವಾರದಿಂದ ಸದನದಲ್ಲಿ ಏನು ಮಾಡಬೇಕು ಎನ್ನುವುದನ್ನು ನಾವು ತೀರ್ಮಾನಿಸುತ್ತೇವೆ ಎಂದು ತಿಳಿಸಿದ್ದಾರೆ.

ಭೇಟಿ ಕುರಿತು ಜೆಡಿಎಸ್ ಕೂಡ ಸ್ಪಷ್ಟನೆ ನೀಡಿದ್ದು, ಕುಮಾರಕೃಪ ಗೆಸ್ಟ್ ಹೌಸ್‍ಗೆ ಶಾಸಕರು, ಮಂತ್ರಿಗಳು ವಿಶ್ರಾಂತಿ ಪಡೆಯಲು ಹೋಗುವುದು ಸಹಜ. ಇದೇ ಸಂದರ್ಭದಲ್ಲಿ ಸಾ.ರಾ ಮಹೇಶ್ ಅವರು ಆಕಸ್ಮಿಕವಾಗಿ ಕೆ.ಎಸ್ ಈಶ್ವರಪ್ಪ, ಮುರಳೀಧರ್ ರಾವ್ ಅವರನ್ನು ದಾರಿ ಮಧ್ಯೆ ಭೇಟಿಯಾಗಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸದೃಢವಾಗಿದ್ದು, ಸಮರ್ಥ ಆಡಳಿತ ಮುಂದುವರಿಸಲಿದೆ ಎಂದು ಟ್ವೀಟ್ ಮಾಡಿದೆ.

Comments

Leave a Reply

Your email address will not be published. Required fields are marked *