ರೆಸಾರ್ಟ್​​ನಲ್ಲಿ ಯೋಗಾಭ್ಯಾಸ, ವಾಕಿಂಗ್ – ರಿಲ್ಯಾಕ್ಸ್ ಮೂಡಲ್ಲಿ ‘ದಳ’ಪತಿಗಳು

ಬೆಂಗಳೂರು: ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೇರ್ ರೆಸಾರ್ಟಿನಲ್ಲಿರುವ ಜೆಡಿಎಸ್ ಶಾಸಕರು ಫುಲ್ ರಿಲ್ಯಾಕ್ಸ್ ಮೂಡ್‍ನಲ್ಲಿದ್ದು, ವಿಶೇಷ ಯೋಗ ಟೀಚರ್ ಮೂಲಕ ಯೋಗ ಹಾಗೂ ವಾಕಿಂಗ್ ಮಾಡಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಜೆಡಿಎಸ್ ಶಾಸಕರಾದ ಬಂಡೆಪ್ಪ ಕಾಶಂಪೂರ್, ನಾಡಗೌಡ, ಟಿ.ಎ.ಶರವಣ, ಸೇರಿದಂತೆ ಬಹುತೇಕ ಶಾಸಕರು ಯೋಗಾಭ್ಯಾಸದಲ್ಲಿ ನಿರತರಾಗಿದ್ದು, ರೆಸಾರ್ಟಿನಲ್ಲೇ ಫುಲ್ ವಾಕಿಂಗ್, ರೆಸ್ಟ್ ಮಾಡುತ್ತಿದ್ದಾರೆ. ಶಾಸಕರು ತಂಗಿರುವ ರೆಸಾರ್ಟಿಗೆ ಪೊಲೀಸ್ ಸರ್ಪಗಾವಲು ಹಾಕಿದ್ದು, ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

ಈ ವೇಳೆ ರೆಸಾರ್ಟ್ ಬಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕಾರ ಮಾಡುವವರೆಗೆ ಸರ್ಕಾರಕ್ಕೆ ಬಹುಮತ ಇದೆ. ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ಬಿಜೆಪಿಯವರು ಯಾರೂ ನನ್ನನ್ನು ಸಂಪರ್ಕಿಸಿಲ್ಲ, ಯಾವುದೇ ಆಫರ್ ನೀಡಿಲ್ಲ. ಬಿಜೆಪಿಯವರ ಆಮಿಷಕ್ಕೆ ಬಲಿಯಾಗಬಾರದೆಂದು ನಾವು ಒಟ್ಟಾಗಿದ್ದೇವೆ ಎಂದು ತಿಳಿಸಿದ್ದಾರೆ.

ನಮ್ಮ ನಾಯಕರ ಸೂಚನೆ ಮೇರೆಗೆ ನಾವು ಹೋಟೆಲಿನಲ್ಲಿದ್ದೇವೆ. ನಿತ್ಯ ಒಬ್ಬೊಬ್ಬ ಶಾಸಕರು ರೆಸಾರ್ಟ್ ಊಟದ ಖರ್ಚು ನೋಡಿಕೊಳ್ಳುತ್ತೇವೆ. ಅಧಿವೇಶನದ ದಿನದವರೆಗೆ ಇಲ್ಲಿಯೇ ಇರುತ್ತೇವೆ. ಇಲ್ಲಿಂದಲೇ ಅಧಿವೇಶನಕ್ಕೆ ಹೋಗುತ್ತೇವೆ. ಇಂದಿನ ರಾಜಕೀಯ ವಿದ್ಯಮಾನಗಳು ನಮ್ಮಂತಹ ಹೊಸಬರಿಗೆ ಆಶ್ಚರ್ಯ ಮೂಡಿಸಿವೆ. ಇದೆಲ್ಲ ವಿಚಿತ್ರ ಸಂಪ್ರದಾಯ ಎಂದು ಹೇಳಿದರು.

ಕ್ಷೇತ್ರದ ಬಗ್ಗೆ ವಿಚಾರಿಸಲು ತಾಲೂಕು, ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಇದ್ದಾರೆ. ಕ್ಷೇತ್ರ ಸಮಸ್ಯೆಯನ್ನು ಅವರು ನೋಡಿಕೊಳ್ಳುತ್ತಾರೆ. ದೂರವಾಣಿ ಮೂಲಕ ವಿಚಾರಿಸುತ್ತಿದ್ದೇನೆ. ಸದ್ಯದ ರಾಜಕೀಯ ಪರಿಸ್ಥಿತಿ ಸರಿಯಿಲ್ಲವೆಂದು ಫೋನ್ ಸ್ವಿಚ್ ಆಫ್ ಮಾಡಿದ್ದೇವೆ. ಕ್ಷೇತ್ರದ ಜನ ಬೇಸರ ಮಾಡಿಕೊಳ್ಳಬಾರದು. ಜನ ಸಹಕಾರ ನೀಡಬೇಕು, ಸರ್ಕಾರಕ್ಕೆ ಏನು ಆಗುವುದಿಲ್ಲ ಸುಭದ್ರವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಮಾತನಾಡಿದ್ದು ನಿಜ: ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್‍ನಿಂದ ರಿವರ್ಸ್ ಆಪರೇಷನ್ ಮಾಡುವುತ್ತಿರುವುದು ಸತ್ಯ. ಬಿಜೆಪಿ ಶಾಸಕ ರಾಮಪ್ಪ ಲಮಾಣಿಯವರ ಜೊತೆ ಮಾತಾಡಿರುವುದು ನಿಜ ಎಂದು ಮಾಜಿ ಶಾಸಕರ ಕೋನರೆಡ್ಡಿ ಹೇಳಿದ್ದಾರೆ. ಆದರೆ ಆಪರೇಷನ್ ಮಾಡುವುದಕ್ಕೆ ನಾನು ಅವರೊಂದಿಗೆ ಮಾತನಾಡಿಲ್ಲ. ಅವರು ನಮ್ಮ ಬೀಗರು ಹೀಗಾಗಿ ಮಾತನಾಡುತ್ತಲೇ ಇರುತ್ತೇವೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನಾವು ಖಾಸಗಿಯಾಗಿ ಮಾತನಾಡಿದ್ದೇವೆ ಎಂದರು.

ಮುಂಬೈ ಹೋಟೆಲ್ ಪ್ರವೇಶಿಸಲು ಡಿ.ಕೆ.ಶಿವಕುಮಾರ್‍ಗೆ ತಡೆ ಹಿಡಿದ ವಿಚಾರದ ಕುರಿತು ಪ್ರತಿಕ್ರಯಿಸಿದ ಅವರು, ಹಿರಿಯ ಸಚಿವರಿಗೆ ಹೀಗೆ ಪ್ರವೇಶ ನಿರಾಕರಣೆ ಮಾಡುವುದು ಸರಿಯಲ್ಲ. ರಾಜ್ಯ ರಾಜ್ಯಗಳಲ್ಲಿ ಬಾಂಧವ್ಯ ಮುಖ್ಯ. ಪ್ರೋಟೋ ಕಾಲ್ ಪ್ರಕಾರ ರಾಜ್ಯದ ಅತಿಥಿಗಳಿಗೆ ಅತಿಥ್ಯ ಮಾಡಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ರಾಜ್ಯಕ್ಕೆ ಅವರ ಸಚಿವರು ಆಗಮಿಸಿದರೆ ನಾವು ಗೌರವ ಕೊಡುತ್ತೇವೆ. ಆದರೆ, ಮುಂಬೈ ಪ್ರಕರಣ ನೋಡಿದರೆ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ ಎಂಬ ಅನುಮಾನ ಮೂಡುತ್ತಿದೆ. ಡಿ.ಕೆ.ಶಿವಕುಮಾರ್ ಅವರನ್ನು ಒಳಗೆ ಬಿಡದಿರುವುದು ರಾಜ್ಯಕ್ಕೆ ಮಾಡಿದ ಅಪಮಾನ. ಇಂತಹ ಬೆಳವಣಿಗೆ ದೇಶದಲ್ಲಿ ಇದೇ ಮೊದಲು. ಮಹಾರಾಷ್ಟ್ರ ಸಿಎಂ ಈ ಬಗ್ಗೆ ಗಮನಹರಿಸಬೇಕು. ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕೋನರೆಡ್ಡಿ ವಾಖ್ಯಾನಿಸಿದ್ದಾರೆ.

Comments

Leave a Reply

Your email address will not be published. Required fields are marked *