14 ನಿಮಿಷದ ಮಾತುಕತೆಯಲ್ಲಿ ನಡೆಯಲಿಲ್ಲ ಸಂಧಾನ – ಸೌಮ್ಯಾ, ಸೋನಿಯಾ ಸಭೆಯ ಇನ್‍ಸೈಡ್ ಸ್ಟೋರಿ

ನವವೆಹಲಿ: ರಾಜೀನಾಮೆ ನೀಡಿರುವ ನನ್ನ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದ್ದ ರಾಮಲಿಂಗಾ ರೆಡ್ಡಿ ಅವರನ್ನು ಮನ ಒಲಿಸುವ ಕಾರ್ಯವೂ ವಿಫಲವಾಗಿದೆ.

ಇಂದು ಸೌಮ್ಯಾ ರೆಡ್ಡಿ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಅವರ ನಿವಾಸಲ್ಲಿ ಭೇಟಿ ಮಾಡಿ 14 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಿರ್ಧಾರ ಬದಲಿಸಲು ತಂದೆಗೆ ಹೇಳು. ಕಷ್ಟ ಕಾಲದಲ್ಲಿ ನಮ್ಮ ಜತೆ ಇರಿ ಎಂದು ಸೋನಿಯಾ ಗಾಂಧಿ ಸೌಮ್ಯಾ ರೆಡ್ಡಿ ಅವರಿಗೆ ಸಲಹೆ ನೀಡಿದರು.

ಮಾತುಕತೆಯ ವೇಳೆ ಸೋನಿಯಾ ಗಾಂಧಿ ಅವರು ರಾಮಲಿಂಗಾರೆಡ್ಡಿ ಅವರಿಗೆ ಫೋನ್ ಮಾಡುವಂತೆ ಸೂಚಿಸಿದರು. ಹೀಗಾಗಿ ಸೌಮ್ಯಾರೆಡ್ಡಿ ಅವರು ಒಟ್ಟು 3 ಬಾರಿ ತಂದೆಗೆ ಫೋನ್ ಮಾಡಿದ್ದಾರೆ. ಆದರೆ ರಾಮಲಿಂಗಾರೆಡ್ಡಿ ಅವರು ಪುತ್ರಿ ಫೋನ್ ಮಾಡಿದರೂ ರಿಸೀವ್ ಮಾಡಲಿಲ್ಲ. ಆಗ ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್ ಅವರು ರಾಮಲಿಂಗಾರೆಡ್ಡಿ ಅವರಿಗೆ ಕರೆ ಮಾಡಿದರು. ಅದಕ್ಕೂ ಡೋಂಟ್ ಕೇರ್ ಎಂದು ಮಾಜಿ ಸಚಿವರು ಸಂಧಾನಕ್ಕೆ ಹಿಂದೇಟು ಹಾಕಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.

ರಾಮಲಿಂಗಾರೆಡ್ಡಿಯವರು ಫೋನ್ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು, ನಾಳೆ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೌಮ್ಯಾರೆಡ್ಡಿ ಅವರು, ಆಯ್ತು ಮೇಡಂ ನಿಮ್ಮ ಅಭಿಪ್ರಾಯವನ್ನು ನಾನು ಹೇಳುತ್ತೇನೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಈ ಮಧ್ಯೆ ತಂದೆ ಹಾಗೂ ಕಾಂಗ್ರೆಸ್ ಜೊತೆಗಿನ ಸಂಬಂಧ ಗುಣಗಾನ ಮಾಡಿದ್ದಾರೆ ಎಂದು ಮೂಲಗಳಿಂದ ಕೇಳಿಬಂದಿದೆ.

Comments

Leave a Reply

Your email address will not be published. Required fields are marked *