ಸ್ಪೀಕರ್ ರಾಜೀನಾಮೆಯನ್ನು ಅಂಗೀಕರಿಸಬೇಕು: ಹೊರಟ್ಟಿ

ಬೆಳಗಾವಿ: ಎಲ್ಲ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅಂಗೀಕರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ದಿನಗಳಿಂದ ಹೊರಗೆ ಹೋಗಿ ಬರುವಂತಹ ಶಾಸಕರು ಈ ಸರ್ಕಾರದ ಮೇಲೆ ಅವಿಶ್ವಾಸ ಹೊಂದಿದ್ದಾರೆ. ಹೀಗಾಗಿ ಸ್ಪೀಕರ್ ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿ, ಕಳುಹಿಸಿಬೇಕು ಎಂದರು.

ಇಂತಹ ಶಾಸಕರದ್ದು ‘ಆಡೋಣು ಬಾ ಕೆಡಸೋಣ ಬಾ’ ಎಂಬ ಆಟ ಅಗಿದೆ. ನಾನು ಎಂದೂ ಈ ರೀತಿಯ ಬೆಳವಣಿಗೆ ನೋಡಿಲ್ಲಾ, ರಾಜ್ಯಪಾಲರಿಗೆ ರಾಜೀನಾಮೆ ಕೊಡುವುದನ್ನು ಈವರೆಗೆ ನೋಡಿಲ್ಲ. ಸ್ಪೀಕರ್‍ಗೆ ರಾಜೀನಾಮೆ ಕೊಡಬೇಕು. ಆದರೆ ರಾಜ್ಯಪಾಲರಿಗೆ ರಾಜೀನಾಮೆ ನೀಡುವ ಮೂಲಕ ಹೊಸ ಪದ್ಧತಿ ಆರಂಭ ಮಾಡಿದ್ದಾರೆ. ಕ್ಷೇತ್ರ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿಲ್ಲ. ಬದಲಿಗೆ ಮಂತ್ರಿ ಮಾಡಲಿಲ್ಲ ಎಂದು ರಾಜೀನಾಮೆ ನೀಡಿದ್ದಾರೆ ಎಂದು ಕುಟುಕಿದರು.

ಎಲ್ಲರನ್ನೂ ಮಂತ್ರಿ ಮಾಡಲು ಸಾಧ್ಯವಿಲ್ಲ, ಇದು ಒಳ್ಳೆಯ ಬೆಳವಣಿಗೆ ಅಲ್ಲ. ಕುಮಾರಸ್ವಾಮಿ ಅವರು ಇದನ್ನೆಲ್ಲ ನೋಡಿ ಸರ್ಕಾರ ಉಳಿಸುವ ಸಾಹಸಕ್ಕೆ ಹೋಗಬಾರದು. ಸಿಎಂ ಸ್ವಇಚ್ಛೆಯಿಂದ ತಾವೇ ರಾಜೀನಾಮೆ ನೀಡುವುದು ಒಳ್ಳೆಯದು. ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ ನಂತರವೂ ಬಿಜೆಪಿ ಜೊತೆ ಶಾಸಕರು ಸೇರಿ ಸರ್ಕಾರ ರಚಿಸುವುದಕ್ಕಿಂತ ಮರಳಿ ಚುನಾವಣೆಗೆ ಹೋಗುವುದು ಸೂಕ್ತ ಎಂದು ಬಸವರಾಜ್ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *