ಗೌಡರ ಕುಟುಂಬದ ಹೆಣ್ಣುಮಕ್ಕಳ ಕಿರುಕುಳದಿಂದ ನನಗೆ ತುಂಬಾ ಬೇಸರವಾಗಿದೆ – ನಾರಾಯಣಗೌಡ

ಬೆಂಗಳೂರು: ಜೆಡಿಎಸ್ ಪಕ್ಷದಲ್ಲಿ ನನಗೆ ತುಂಬಾ ನೋವಾಗಿದೆ. ವಿಶೇಷವಾಗಿ ದೇವೇಗೌಡ ಕುಟುಂಬದ ಹೆಣ್ಣುಮಕ್ಕಳ ಕಿರುಕುಳದಿಂದ ನನಗೆ ತುಂಬಾ ಬೇಸರವಾಗಿದೆ ಎಂದು ರಾಜೀನಾಮೆ ನೀಡಿರುವ ಕೆ.ಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಅವರು ಹೇಳಿದ್ದಾರೆ.

ಇಂದು ಮುಂಬೈನಿಂದ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ನಾನು ಬೇಸರಗೊಂಡಿರುವ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆ. ಆದರೆ ಅದರಿಂದ ಯಾವುದೇ ರೀತಿಯ ಪ್ರಯೋಜನ ಆಗಲಿಲ್ಲ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

ಈಗ ನನ್ನನ್ನು ಅಪರೇಷನ್ ಕಮಲಕ್ಕೆ ಒಳಗಾಗಿದ್ದೀರಿ. ದುಡ್ಡು ತಗೆಕೊಂಡಿದ್ದೇನೆ ಎನ್ನುತ್ತೀರಿ. ಅದರೆ ಚಿಕ್ಕ ವಯಸ್ಸಿನಲ್ಲಿ ಮುಂಬೈಗೆ ಹೋಗಿ 2 ರೂಪಾಯಿಯಲ್ಲಿ ಜೀವನ ನಡೆಸಿ ಉದ್ಯಮಿ ಅಗಿದ್ದೇನೆ. ನನ್ನ ಪೋಷಕರ ಕ್ಷೇತ್ರವಾದ ಕಾರಣ ಸಮಾಜ ಸೇವೆ ಮಾಡಬೇಕು ಎಂದು ನಾನು ಕೆ.ಆರ್ ಪೇಟೆಗೆ ಬಂದೆ. ಕ್ಷೇತ್ರದ ಜನ ಹಾಗೂ ದೇವೇಗೌಡರ ಆಶೀರ್ವಾದದಿಂದ ನಾನು ಚುನಾವಣೆ ಗೆದ್ದೆ. ಅದರೆ ದೇವೇಗೌಡರು ಹಾಗೂ ಅವರ ಕುಟುಂಬದವರೇ ಕಿರುಕುಳ ನೀಡಿದ ಮೇಲೆ ನಾನು ಏನು ಮಾಡಲಿ ಎಂದು ಪ್ರಶ್ನಿಸಿದರು.

ಇನ್ನೂ ಬಿಜೆಪಿ ಸೇರುವ ಬಗ್ಗೆ ನಾನು ತೀರ್ಮಾನ ಮಾಡಿಲ್ಲ. ರಾಜೀನಾಮೆ ಅಂಗೀಕಾರವಾದ ನಂತರ ಬಿಜೆಪಿ ಸೇರುವ ಬಗ್ಗೆ ಬೆಂಬಲಿಗರ ಅಭಿಪ್ರಾಯ ಪಡೆಯುತ್ತೇನೆ. ಮುಂದೆ ಚುನಾವಣೆಗೆ ನಿಲ್ಲುವ ಬಗ್ಗೆ ಕ್ಷೇತ್ರ ಜನರು ಹಾಗೂ ಬೆಂಬಲಿಗರ ಅಭಿಪ್ರಾಯ ಪಡೆಯುತ್ತೇನೆ. ಮೊನ್ನೆ ಸಂಜೆ ನಾನು ಕ್ಷೇತ್ರಕ್ಕೆ ಬಂದು ಬೆಂಬಲಿಗರ ಜೊತೆ ಸಭೆ ಮಾಡಿ ಹೋಗಿದ್ದೇನೆ ಎಂದು ತಿಳಿಸಿದರು.

ಇದೇ ವೇಳೆ ಮನೆ ಖಾಲಿ ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನಾನು ರಾತ್ರೋ ರಾತ್ರಿ ಮನೆ ಖಾಲಿ ಮಾಡಿಲ್ಲ. ಸಚಿವ ತಮ್ಮಣ್ಣ ಬಳಿ ನಾನು ನೋವು ಹೇಳಿಕೊಂಡಿದ್ದೇನೆ. ಮುಖ್ಯಮಂತ್ರಿ ಅವರ ಮೇಲೆ ಬೇಸರ ವ್ಯಕ್ತಪಡಿಸುವ ಪ್ರಶ್ನೆಯೇ ಇಲ್ಲ. ದೇವೇಗೌಡರು ಹಾಗೂ ಅವರ ಕುಟುಂಬದವರೇ ನನ್ನನ್ನು ಚುನಾವಣೆಗೆ ನಿಲ್ಲಿಸಿದರು. ನನಗೆ ಯಾವ ಪಕ್ಷದಿಂದ ಆಫರ್ ಬಂದಿಲ್ಲ, ಆ ಬಗ್ಗೆ ನಾನು ಯೋಚನೆ ಮಾಡಿಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *