ಕಾರಿನ ಗ್ಲಾಸಿಗೆ ಪೇಪರ್ ಅಂಟಿಸಿ ಹೋಟೆಲಿಗೆ ತೆರಳಿದ ಅತೃಪ್ತ ಶಾಸಕರು

ಮುಂಬೈ: ರಾಜೀನಾಮೆ ನೀಡಿ ಪ್ರಯಾಣ ಬೆಳೆಸಿದ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು ಶನಿವಾರ ರಾತ್ರಿ ಮುಂಬೈನ ಐಷಾರಾಮಿ ಹೋಟೆಲ್ ತಲುಪಿದ್ದಾರೆ.

ಬೆಂಗಳೂರಿನ ಎಚ್‍ಎಎಲ್‍ನಿಂದ ವಿಶೇಷ ವಿಮಾನದಲ್ಲಿ ಸಂಜೆ ಪ್ರಯಾಣ ಬೆಳೆಸಿದ್ದ ಶಾಸಕರು ಮುಂಬೈ ವಿಮಾನ ನಿಲ್ದಾಣವನ್ನು ರಾತ್ರಿ ತಲುಪಿದ್ದಾರೆ. ಬಳಿಕ ಅಲ್ಲಿಂದ ಕಾರಿನಲ್ಲಿ ಐಷರಾಮಿ ಹೋಟೆಲ್ ಸೋಫಿಟೆಲ್ ಸೇರಿಕೊಂಡರು. ಮಾರ್ಗ ಮಧ್ಯೆ ಕಾರಿನಲ್ಲಿ ಶಾಸಕರನ್ನು ನೋಡಿದ ಮಾಧ್ಯಮದವರು ಫೋಟೋ ಕಿಕ್ಲಿಸಲು ಮುಂದಾದರು. ಕೂಡಲೇ ಶಾಸಕರು ತಕ್ಷಣವೇ ಕಾರಿನ ಗಾಜಿಗೆ ಪೇಪರ್ ಅಂಟಿಸಿದ್ದಾರೆ.

ಅತೃಪ್ತ ಶಾಸಕರು ಸೋಫಿಟೆಲ್ ಐಷರಾಮಿ ಹೋಟೆಲ್ ಪ್ರವೇಶಕ್ಕೂ ಮುನ್ನವೇ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಈ ಮೂಲಕ ಸರ್ಕಾರ ಪತನವಾದ ಬಳಿಕ ರಾಜ್ಯಕ್ಕೆ ಮರಳಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಶಾಸಕರಾದ ರಾಮಲಿಂಗಾರೆಡ್ಡಿ, ಮುನಿರತ್ನ ಹಾಗೂ ಆನಂದ್ ಸಿಂಗ್ ಅವರು ಮುಂಬೈಗೆ ಹೋಗಿಲ್ಲ. ಆದರೆ ರೆಸಾರ್ಟ್ ರಾಜಕೀಯವನ್ನು ವಿರೋಧಿಸಿದ್ದ ವಿಶ್ವನಾಥ್ ಅವರೇ ಸಾರಥ್ಯ ವಹಿಸಿ, 10 ಜನರೊಂದಿಗೆ ಮುಂಬೈನ ರಿನೈಸಾನ್ಸ್ ರೆಸಾರ್ಟ್ ಗೆ ತೆರಳಿದ್ದಾರೆ. ಅತೃಪ್ತರಿಗಾಗಿ ಈಗಾಗಲೇ 14 ರೂಂ ಬುಕ್ ಆಗಿದೆ. ಇವರ ಜೊತೆಗೆ ಮಲ್ಲೇಶ್ವರದ ಬಿಜೆಪಿ ಶಾಸಕ ಡಾ.ಅಶ್ವಥ್ ನಾರಾಯಣ, ಬಿಎಸ್‍ವೈ ಪಿಎ ಸಂತೋಷ್ ಇದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.

ರಾಜೀನಾಮೆ ಕೊಟ್ಟ ಅತೃಪ್ತರು:
ಗೋಕಾಕ್‍ನ ರಮೇಶ್ ಜಾರಕಿಹೊಳಿ, ಹಿರೇಕೆರೂರುನ ಬಿ.ಸಿ. ಪಾಟೀಲ್, ಮಸ್ಕಿಯ ಪ್ರತಾಪ್‍ಗೌಡ ಪಾಟೀಲ್, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಅಥಣಿಯ ಮಹೇಶ್ ಕುಮಟಳ್ಳಿ, ಹುಣಸೂರುನ ಎಚ್. ವಿಶ್ವನಾಥ್, ಕೆ.ಆರ್.ಪೇಟೆಯ ನಾರಾಯಣಗೌಡ, ಮಹಾಲಕ್ಷ್ಮಿ ಲೇಔಟ್‍ನ ಗೋಪಾಲಯ್ಯ, ಬಿಟಿಎಂ ಲೇಔಟ್‍ನ ರಾಮಲಿಂಗಾರೆಡ್ಡಿ, ಯಶವಂತಪುರದ ಎಸ್.ಟಿ ಸೋಮಶೇಖರ್, ಕೆ.ಆರ್. ಪುರಂನ ಭೈರತಿ ಬಸವರಾಜ್ ರಾಜೀನಾಮೆ ನೀಡಿದ್ದು ಮುಂಬೈಗೆ ಹೋಗಿದ್ದಾರೆ. ಆದರೆ ಆರ್‍ಆರ್ ನಗರದ ಮುನಿರತ್ನ, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ಹಾಗೂ ವಿಜಯನಗರದ ಆನಂದ ಸಿಂಗ್ ಅವರು ರಾಜೀನಾಮೆ ನೀಡಿದ್ದರೂ ಮುಂಬೈಗೆ ಹೋಗಿಲ್ಲ.

ಅತಂತ್ರ ಸ್ಥಿತಿಯಲ್ಲಿ ಅಧಿಕಾರಕ್ಕೆ ಬಂದ ದೋಸ್ತಿ ಸರ್ಕಾರದ ಭವಿಷ್ಯ ಲೋಕಸಭೆ ಚುನಾವಣೆ ಬಳಿಕ ಅಂತ್ಯವಾಗುತ್ತೆ ಅನ್ನೋ ವ್ಯಾಪಕ ವದಂತಿಯೇ ಈಗ ಸತ್ಯವಾಗುತ್ತಿದೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನದಂದಲೂ ನಡೆದ ಬೃಹನ್ನಾಟಕ ಇವತ್ತು ಮತ್ತೊಂದು ಕ್ಷಿಪ್ರ ವಿದ್ಯಮಾನದೊಂದಿಗೆ ಮತ್ತೊಂದು ತಿರುವಿಗೆ ಕಾರಣವಾಗಿದೆ. ಮೊನ್ನೆಯಷ್ಟೇ ಆನಂದ್ ಸಿಂಗ್ ಅವರಿಂದ ಆರಂಭವಾದ ಈ ರಾಜೀನಾಮೆ ರೋಗ ಇವತ್ತು 13 ಶಾಸಕರ ರಾಜೀನಾಮೆವರೆಗೆ ತಲುಪಿದೆ. ಬೆಳಗ್ಗೆ 11 ಗಂಟೆಯಿಂದ ನಡೆದ ಈ ರಾಜೀನಾಮೆ ಪರ್ವ ಮಧ್ಯಾಹ್ನ ನಾಲ್ಕುವರೆ ಐದು ಗಂಟೆವರೆಗೆ ನಡೆಯಿತು. ಬಳಿಕ ಸಂಜೆ 6.35ಕ್ಕೆ ಎಚ್‍ಎಎಲ್‍ನಿಂದ ವಿಮಾನ ಟೇಕಾಫ್ ಆಗಿ, 8.10ಕ್ಕೆ ಮುಂಬೈನಲ್ಲಿ ಲ್ಯಾಂಡ್ ಆಗಿದೆ.

ಕಾಂಗ್ರೆಸ್-ಜೆಡಿಎಸ್‍ನ 14 ಶಾಸಕರು ಶನಿವಾರ ರಾಜೀನಾಮೆ ಕೊಟ್ಟಿದ್ದಾರೆ. ಇದು ಇಷ್ಟಕ್ಕೇ ಮುಗಿದಿಲ್ಲ. ನಾಳೆ ಅಥವಾ ಸೋಮವಾರವೂ ಮುಂದುವರಿಯುತ್ತದೆ ಎಂದು ಕೇಳಿ ಬಂದಿದೆ.

ರಾಜೀನಾಮೆ ಮಾಡಲಿರುವ ಶಾಸಕರು ಯಾರು?
* ನಾಗೇಂದ್ರ, ಬಳ್ಳಾರಿ ಗ್ರಾಮೀಣ
* ಅನಿಲ್ ಚಿಕ್ಕಮಾದು, ಎಚ್‍ಡಿ ಕೋಟೆ
* ಗಣೇಶ್ ಹುಕ್ಕೇರಿ, ಚಿಕ್ಕೋಡಿ
* ಅಂಜಲಿ ನಿಂಬಾಳ್ಕರ್, ಖಾನಾಪುರ
* ಶ್ರೀಮಂತ ಪಾಟೀಲ್, ಕಾಗವಾಡ
* ಸೌಮ್ಯ ರೆಡ್ಡಿ, ಜಯನಗರ
* ವಿ. ಮುನಿಯಪ್ಪ, ಶಿಡ್ಲಘಟ್ಟ

Comments

Leave a Reply

Your email address will not be published. Required fields are marked *