ಬೆಂಗಳೂರಿಗರೇ ಸೆಪ್ಟೆಂಬರ್‌ನಿಂದ ಹುಷಾರ್: ಸಿಕ್ಕ ಸಿಕ್ಕಲ್ಲಿ ಕಸ ಹಾಕಿದ್ರ ಕಠಿಣ ಕ್ರಮ

ಬೆಂಗಳೂರು: ಮಾರ್ಷಲ್‍ಗಳು ಮತ್ತಷ್ಟು ಕಾರ್ಯೊನ್ಮುಖವಾಗಲಿದ್ದು, ಸಿಕ್ಕ ಸಿಕ್ಕಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಈ ನಿಟ್ಟಿನಲ್ಲಿ ದಂಡದ ಪ್ರಮಾಣವನ್ನು ಸೆಪ್ಟಂಬರ್ ನಿಂದ 100 ರೂ. ರಿಂದ 500 ರೂ.ಗೆ ಏರಿಕೆ ಮಾಡಲು ಮುಂದಾಗಿದೆ.

ಘನತ್ಯಾಜ್ಯ ನಿರ್ವಹಣೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಅವರು, ಕಸದ ಹೊಸ ಟೆಂಡರ್ ಗುತ್ತಿಗೆದಾರರು ಮಿಕ್ಸ್ ಕಸ ಪಡೆಯುವುದಿಲ್ಲ. ಹಸಿ ಕಸ, ಒಣ ಕಸ ಗುತ್ತಿಗೆದಾರರು ಬೇರೆ ಬೇರೆ ಎಂದು ಗುರುತಿಸಲಾಗುತ್ತದೆ. ಪೌರ ಕಾರ್ಮಿಕರಿಗೆ ಕಸ ಕೊಡದಿದ್ದರೆ ಆ ಮನೆಗಳಿಗೆ ಅಧಿಕಾರಿಗಳೇ ಭೇಟಿ ಮಾಡುತ್ತಾರೆ. ಎಲ್ಲಂದರಲ್ಲಿ ಕಸ ಹಾಕಿದರೆ, ರೋಡ್ – ಅಂಡರ್ ಪಾಸ್, ಬ್ಲಾಕ್ ಸ್ಪಾರ್ಟ್ ಗಳಲ್ಲಿ ಕಸ ಕಂಡರೆ ಭಾರೀ ಪ್ರಮಾಣದಲ್ಲಿ ದಂಡ ಹಾಕಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಡ್ಡಾಯವಾದ ತ್ಯಾಜ್ಯ ವಿಂಗಡನೆಗೆ ಡೆಡ್ ಲೈನ್ ನಿಗದಿಯಾಗಿದೆ. ಡಿಸೆಂಬರ್ ತಿಂಗಳ ಕಡೆಯ ವಾರದೊಳಗೆ ನಗರವು ಸಂಪೂರ್ಣವಾಗಿ ಸ್ವಚ್ಛವಾಗಬೇಕು. ಮನೆ ಮನೆಯಲ್ಲೇ ತ್ಯಾಜ್ಯ ವಿಂಗಡಣೆ ಪಕ್ಕಾ ಆಗಬೇಕು. ಸೆಪ್ಟೆಂಬರ್ ತಿಂಗಳಿಗೆ ಶೇ.90ರಷ್ಟು ತ್ಯಾಜ್ಯ ವಿಂಗಡನೆ ಮಾಡಲಾಗುತ್ತದೆ. ಲ್ಯಾಂಡ್ ಫೀಲ್ ಶೇ.13 ರಿಂದ 15 ರಷ್ಟು ಇಳಿಸಲು ತೀಮಾನಿಸಲಾಗಿದೆ. ಪ್ಲಾಸ್ಟಿಕ್ ಬಳಕೆಯ ಸಂಪೂರ್ಣ ನಿಷೇಧಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಕಸದ ಸೆಸ್ ಏರಿಕೆಗೂ ಚಿಂತನೆ ನಡೆದಿದೆ. ಶೇ.15ರಷ್ಟು ಹೆಚ್ಚಳ ಮಾಡುವ ಕುರಿತು ಚರ್ಚೆಯಾಗಿದೆ. ಅಪಾಟ್ರ್ಮೆಂಟ್‍ಗಳ ಬಲ್ಕ್ ತ್ಯಾಜ್ಯ ಸಂಸ್ಕರಣೆ ಮಾಡಿಕೊಳ್ಳಬೇಕು. ಪೌರಕಾರ್ಮಿಕರಿಗೆ ಪ್ರತಿ ತಿಂಗಳು 27 ಕೋಟಿ ರೂ. ವೇತನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬ್ಲಾಕ್ ಸ್ಪಾರ್ಟ್ ಗಳಿಗೆ ಸಿಸಿಟಿವಿ ಅಳವಡಿಕೆ ಮಾಡಲಾಗುತ್ತದೆ. ರಾತ್ರೋ ರಾತ್ರಿ ಕಸ ಹಾಕುವವರ ಮೇಲೆ ಕಣ್ಣು ಇಡಲಾಗುತ್ತದೆ. ಮಾರ್ಷಲ್‍ಗಳು ಕಸ ಹಾಕುವವರ ಪತ್ತೆ ಹಚ್ಚಲಿದ್ದಾರೆ. ಈ ನಿಟ್ಟಿನಲ್ಲಿ ರಾತ್ರಿ 8 ಗಂಟೆಯಿಂದ 1 ಗಂಟೆರಯವರೆಗೂ ಮಾರ್ಷಲ್ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಆಡಳಿತ ಪಕ್ಷ ನಾಯಕ ಅಬ್ದುಲ್ ವಾಜೀದ್, ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್ ಹಾಗೂ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *