ವಿಶ್ವಕಪ್ ಟೂರ್ನಿಯಲ್ಲಿ ದಾಖಲೆ ಬರೆದ ಶಮಿ

ಬರ್ಮಿಂಗ್ ಹ್ಯಾಮ್: ಟೀಂ ಇಂಡಿಯಾ ಬಲಗೈ ವೇಗಿ ಮೊಹಮ್ಮದ್ ಶಮಿ ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಪಡೆಯುವ ಮೂಲಕ ವಿಶ್ವಕಪ್ ಟೂರ್ನಿನಲ್ಲಿ ದಾಖಲೆ ಬರೆದಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳನ್ನು ಕಾಡಿದ್ದ ಬೈರ್‌ಸ್ಟೋವ್ ಹಾಗೂ ನಾಯಕ ಇಯಾನ್ ಮಾರ್ಗನ್ (1 ರನ್) ವಿಕೆಟ್ ಕೀಳುವ ಮೂಲಕ ಮೊಹಮ್ಮದ್ ಶಮಿ ಮಿಂಚಿದ್ದಾರೆ. ಅಲ್ಲದೇ ಇನ್ನಿಂಗ್ಸ್ ನ 44 ಓವರ್ ನ ಮೊದಲ ಎಸೆತದಲ್ಲಿ 44 ರನ್ ಗಳಿಸಿದ್ದ ಜೋ ರೂಟ್ ವಿಕೆಟ್ ಪಡೆದರು.

ಅಂತಿಮ ಅಂತದಲ್ಲಿ ಬಲ್ಟರ್ (20 ರನ್) ಹಾಗೂ ವೋಕ್ಸ್ (7 ರನ್) ವಿಕೆಟ್ ಪಡೆದು ಇಂಗ್ಲೆಂಡ್ ರನ್ ವೇಗಕ್ಕೆ ಕಡಿವಾಣ ಹಾಕಿದರು. 10 ಓವರ್ ಬೌಲ್ ಮಾಡಿದ ಶಮಿ 5 ವಿಕೆಟ್ ಪಡೆದು 69 ರನ್ ಬಿಟ್ಟುಕೊಟ್ಟರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ 3 ಬಾರಿ 4 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಸತತ 3 ಪಂದ್ಯಗಳಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಉರುಳಿಸಿದ ಭಾರತದ ಮೊಟ್ಟ ಮೊದಲ ವೇಗಿ ಎನ್ನುವ ಹೆಗ್ಗಳಿಕೆಗೆ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ. 2011ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಶಾಹಿದ್ ಆಫ್ರಿದಿ ಈ ದಾಖಲೆ ಮಾಡಿದ್ದರು. ಹೀಗಾಗಿ ಸತತ 3 ಪಂದ್ಯಗಳಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ವಿಶ್ವದ 2ನೇ ಬೌಲರ್ ಎನ್ನುವ ಖ್ಯಾತಿಗೂ ಶಮಿ ಪಾತ್ರರಾಗಿದ್ದಾರೆ.

ಟೀಂ ಇಂಡಿಯಾ ಬಲಗೈ ವೇಗಿ ಭುವನೇಶ್ವರ್ ಕುಮಾರ್ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರು. ಹೀಗಾಗಿ ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಭುವನೇಶ್ವರ್ ಸ್ಥಾನವನ್ನು ಮೊಹಮ್ಮದ್ ಶಮಿ ತುಂಬಿದರು. ದೊರೆತ ಅವಕಾಶವನ್ನು ಸಮರ್ಪಕ ಪ್ರದರ್ಶನ ನೀಡಿದ ಶಮಿ ಅಫ್ಘಾನಿಸ್ತಾನ ವಿರುದ್ಧ 4 ವಿಕೆಟ್, ವೆಸ್ಟ್ ಇಂಡೀಸ್ ವಿರುದ್ಧ 4 ವಿಕೆಟ್ ಹಾಗೂ ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಆಡಿರುವ ಮೂರು ಪಂದ್ಯಗಳಲ್ಲಿ 13 ವಿಕೆಟ್ ಸಾಧನೆ ಮಾಡಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 10 ಪಂದ್ಯ ಆಡಿರುವ ಶಮಿ 30 ವಿಕೆಟ್ ಪಡೆದಿದ್ದಾರೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅತಿ ವೇಗವಾಗಿ 30 ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಅಷ್ಟೇ ಅಲ್ಲದೆ ಶಮಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. 1987 ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಚೇತನ್ ಶರ್ಮಾ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ನ್ಯೂಜಿಲೆಂಡ್ ವಿರುದ್ಧ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಶರ್ಮಾ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. 32 ವರ್ಷಗಳ ಬಳಿಕ ಮತ್ತೆ ಮೊಹಮ್ಮದ್ ಶಮಿ ಹ್ಯಾಟ್ರಿಕ್ ಪಡೆದಿದ್ದಾರೆ. ಅಲ್ಲದೇ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಹ್ಯಾಟ್ರಿಕ್ ಸಾಧನೆ ಮಾಡಿದ 10ನೇ ಬೌಲರ್ ಕೂಡ ಆಗಿದ್ದಾರೆ.

Comments

Leave a Reply

Your email address will not be published. Required fields are marked *