ಗ್ರಾಮವಾಸ್ತವ್ಯ ಬೆನ್ನಲ್ಲೇ ಸಿಎಂರಿಂದ ಜಲಕ್ರಾಂತಿಯತ್ತ ಹೆಜ್ಜೆ

ಬೆಂಗಳೂರು: ಮೊದಲ ಹಂತದ ಗ್ರಾಮ ವಾಸ್ತವ್ಯ ಮುಗಿಸಿ ಶುಕ್ರವಾರ ರಾತ್ರಿ ಅಮೆರಿಕ ವಿಮಾನ ಹತ್ತಿರುವ ಸಿಎಂ, ಅಲ್ಲಿಂದ ಬಂದ ಮೇಲೆ ಜಲಕ್ರಾಂತಿಗಾಗಿ ಹಳ್ಳಿಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ.

ಮಹಾರಾಷ್ಟ್ರದ ಜಾಲ್ನಾ ಜಲ್ಲೆಯ ಕಡವಂಚಿ ಗ್ರಾಮದ ಜಲಕ್ರಾಂತಿ ನೋಡಿ ಪ್ರೇರಣೆಗೊಂಡಿರುವ ಮುಖ್ಯಮಂತ್ರಿ, ರಾಜ್ಯದಲ್ಲಿ ಅದೇ ಮಾದರಿ ಅಳವಡಿಕೆಗೆ ಮುಂದಾಗಿದ್ದಾರೆ. ರೈತರಲ್ಲಿ ಜಲಕ್ರಾಂತಿ ಜಾಗೃತಿ ಮೂಡಿಸಲು ಹಳ್ಳಿಗಳಿಗೆ ಭೇಟಿ ನೀಡೋದಾಗಿ ಘೋಷಿಸಿದ್ದಾರೆ.

ಜಲಕ್ರಾಂತಿ ಜೊತೆಗೆ ರೈತರನ್ನು ಸಶಕ್ತಗೊಳಿಸುವ ಕಡವಂಚಿ ಮಾದರಿಯನ್ನು ಶೀಘ್ರ ಪೈಲಟ್ ಯೋಜನೆ ಮೂಲಕ ರಾಜ್ಯದಲ್ಲಿ ಜಾರಿ ಮಾಡಲು ನಿರ್ಧರಿಸಿದ್ದಾರೆ. ಐದು ದಿನದ ಹಿಂದಷ್ಟೇ ತಮ್ಮ ಟ್ವಿಟ್ಟರ್ ಅಕೌಂಟ್‍ನಲ್ಲಿ ಕಡವಂಚಿ ಯಶೋಗಾಥೆ ಕುರಿತ ಸಾಕ್ಷ್ಯ ಚಿತ್ರವನ್ನು ಮುಖ್ಯಮಂತ್ರಿ ಶೇರ್ ಮಾಡಿದ್ದರು.

ಏನಿದು ಕಡವಂಚಿ ಮಾದರಿ?
2 ದಶಕಗಳ ಹಿಂದೆ ಮರಾಠವಾಡದ ಕಡವಂಚಿ ಗ್ರಾಮದಲ್ಲಿ ಭೀಕರ ಬರಗಾಲ ಎದುರಾಗಿತ್ತು. ಹೀಗಾಗಿ 1995ರಲ್ಲಿ ನೀರಾವರಿ ತಜ್ಞರ ನೆರವಿನಿಂದ ಜಲಸಂರಕ್ಷಣೆ ಯೋಜನೆ ಜಾರಿಗೆ ತರಲಾಗಿತ್ತು. ಕಡವಂಚಿ ಗ್ರಾಮದ ರೈತರಿಂದ ಸಾಮೂಹಿಕವಾಗಿ ಚೆಕ್‍ಡ್ಯಾಂ ನಿರ್ಮಾಣ ಮಾಡಲಾಗಿತ್ತು. ಚೆಕ್‍ಡ್ಯಾಂ, ಕೃಷಿ ಹೊಂಡದ ಮೂಲಕ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಲಾಯಿತು.

ಹವಾಮಾನ ಮುನ್ಸೂಚನೆ ಪಡೆಯಲು ಗ್ರಾಮದಲ್ಲೇ ಹವಾಮಾನ ಕೇಂದ್ರವನ್ನು ಕೂಡ ಸ್ಥಾಪಿಸಲಾಗಿತ್ತು. ಎಲ್ಲರ ಜಮೀನುಗಳಲ್ಲಿ ಕೃಷಿ ಹೊಂಡ, ಎಲ್ಲರಿಂದಲೂ ದ್ರಾಕ್ಷಿ ಬೆಳೆ ಬೆಳೆಯಲಾಗಿತ್ತು. ಹೀಗಾಗಿ ಬರಗಾಲದಲ್ಲಿಯೂ ಕಡವಂಚಿ ಗ್ರಾಮ ಹಸಿರಿನಿಂದ ನಳನಳಿಸುತ್ತಿದೆ.

Comments

Leave a Reply

Your email address will not be published. Required fields are marked *