ಇಳಿ ವಯಸ್ಸಿನ ತಂದೆಗೆ ಹುಚ್ಚನ ಪಟ್ಟ ಕಟ್ಟಲು ಮುಂದಾದ ಮಗ

ಬೆಂಗಳೂರು: ಇಳಿ ವಯಸ್ಸಿನಲ್ಲಿ ತಂದೆಗೆ ಆಸರೆ ಆಗಬೇಕಿದ್ದ ಮಗ ವಿಲನ್ ಆಗಿದ್ದಾನೆ. ಆಸ್ತಿಗಾಗಿ ಮಗ ಜನ್ಮ ಕೊಟ್ಟ ತಂದೆಗೆ ಹುಚ್ಚನ ಪಟ್ಟ ಕಟ್ಟಲು ಮುಂದಾಗಿದ್ದಾನೆ

ಮಾರತ್‍ಹಳ್ಳಿಯ ರಮೇಶ್ ಎಂಬವರು ವಯಸ್ಸಲ್ಲಿ ದುಡಿದು ಕೋಟ್ಯಾಂತರ ರೂ. ಆಸ್ತಿ ಮಾಡಿಟ್ಟಿದ್ದಾರೆ. ನನ್ನ ಕಾಲಾನಂತ್ರವಷ್ಟೇ ಸಂಪಾದನೆಯ ಆಸ್ತಿ ಮಗನಿಗೆ ಕೊಡೋದು ಎಂದು ರಮೇಶ್ ಹೇಳಿದ್ದಾರೆ. ತಂದೆ ಬದುಕಿರೋತನಕ ಆಸ್ತಿ ಸಿಗೋದಿಲ್ಲ ಅಂತ ತಿಳಿದ ಮಗ ಗಿರೀಶ್, ತಂದೆಗೆ ಹುಚ್ಚನ ಪಾತ್ರ ಕಟ್ಟಲು ರೆಡಿಯಾಗಿದ್ದಾನೆ. ತಂದೆ ಮಾಡಿಟ್ಟ ಆಸ್ತಿ ಮೇಲೆ ಕಣ್ಣಿಟ್ಟ ಮಗ ಗಿರೀಶ್, ತಂದೆಗೆ ಕೊಡಬಾರದ ಟಾರ್ಚರ್ ಕೊಡುತ್ತಿದ್ದಾನೆ. ಅಷ್ಟೇ ಅಲ್ಲ ರಾಡ್ ನಿಂದ ಮಾರಾಣಾಂತಿಕವಾಗಿ ಹಲ್ಲೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದ ಎಂದು ತಂದೆ ರಮೇಶ್ ಆರೋಪಿಸಿದ್ದಾರೆ.

ಚಿಕಿತ್ಸೆ ಕೊಡಿಸುವ ನೆಪದಲ್ಲಿ ವಾರಗಳ ಕಾಲ ಮಗ ಗಿರೀಶ್, ತಂದೆ ರಮೇಶ್‍ರನ್ನು ಖಾಸಗಿ ಆಸ್ಪತ್ರೆಯಲ್ಲೆ ಬಿಟ್ಟಿದ್ದಾನೆ. ಖಾಸಗಿ ಆಸ್ಪತ್ರೆಯ ವೈದ್ಯರಿಂದ ರಮೇಶ್ ಹುಚ್ಚನ್ನಾಗಿದ್ದಾನೆ ಎಂದು ನಕಲಿ ಸರ್ಟಿಫಿಕೇಟ್ ಪಡೆದುಕೊಂಡಿದ್ದಾನೆ. ಆಸ್ಪತ್ರೆಯಲ್ಲಿ ಕೊಟ್ಟ ನಕಲಿ ಸರ್ಟಿಫಿಕೇಟ್ ತೋರಿಸಿ ನನ್ನ ತಂದೆ ರಮೇಶ್ ಹುಚ್ಚ ಎಂಬಂತೆ ಬಿಂಬಿಸಿ ಆಸ್ತಿ ತನ್ನ ಹೆಸರಿಗೆ ಮಾಡಿಕೊಳ್ಳಲು ಹೊರಟಿದ್ದ ಎಂದು ನೊಂದ ತಂದೆ ರಮೇಶ್ ಕಣ್ಣೀರು ಹಾಕುತ್ತಾರೆ.

ನಕಲಿ ಸರ್ಟಿಫಿಕೇಟ್‍ನಿಂದ ವಿಚಲಿತರಾದ ತಂದೆ ರಮೇಶ್, ನಿಮಾನ್ಸ್ ಆಸ್ಪತ್ರೆಗೆ ಹೋಗಿ ಚೆಕಪ್ ಮಾಡಿಸಿದ್ದಾರೆ. ನಿಮಾನ್ಸ್ ವೈದ್ಯರು ಫಿಟ್ ಆಗಿದ್ದಿಯಾ ಯಾವುದೇ ಕಾಯಿಲೆಗಳು ಇಲ್ಲ ಎಂದು ಖಚಿತ ಪಡಿಸಿದ್ದಾರೆ. ತಂದೆ ರಮೇಶ್ ಮಗನ ವರ್ತನೆಯಿಂದ ಬೇಸತ್ತು ಹೆಚ್‍ಎಎಲ್ ಪೊಲೀಸ್ ಠಾಣೆಗೆ ದೂರು ಕೊಡಲು ಮುಂದಾಗಿದ್ದಾರೆ. ಪೊಲೀಸರು ನೊಂದ ರಮೇಶ್ ಸಹಾಯಕ್ಕೆ ಬರಲು ನಿರಾಕರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಹೆಚ್‍ಎಎಲ್ ಪೊಲೀಸರಿಗೆ ದೂರು ದಾಖಲಿಸಿಕೊಳ್ಳದಂತೆ ಸ್ಥಳೀಯ ರಾಜಕೀಯ ನಾಯಕರಿಂದ ಮಗ ಗಿರೀಶ್ ಒತ್ತಡ ಹಾಕಿಸ್ತಿದ್ದಾನೆ ಎಂದು ನೊಂದ ತಂದೆ ರಮೇಶ್ ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *