ಇದು ಸಾವಲ್ಲ ಬಲಿದಾನ – ವಿಧಾನಸೌಧದಲ್ಲಿ ಆತ್ಮಹತ್ಯೆ ಯತ್ನಕ್ಕೂ ಮುನ್ನ ಸಿಎಂಗೆ ಪತ್ರ

– ಶೌಚಾಲಯದಲ್ಲಿ ಆತ್ಮಹತ್ಯೆಗೆ ಯತ್ನ
– ಮೆಟಲ್ ಡಿಟೆಕ್ಟರ್ ಇದ್ದರೂ ಭದ್ರತಾ ಲೋಪ

ಬೆಂಗಳೂರು: ಸುಮಾರು 6 ಸಾವಿರ ಗ್ರಂಥಪಾಲಕರನ್ನು ಖಾಯಂಗೊಳಿಸಲು ಚಿಕ್ಕಬಳ್ಳಾಪುರ ಮೂಲದ ರೇವಣ್ಣ ಕುಮಾರ್ ಅವರು ವಿಧಾನಸೌಧದ ಶೌಚಾಲಯದಲ್ಲಿ ಕತ್ತು ಕೊಯ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ವಿಚಾರ ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ರೇವಣ್ಣ ಕುಮಾರ್ ಅನೂರಿನಲ್ಲಿರುವ ಲೈಬ್ರೆರಿಯಲ್ಲಿ ಗ್ರಂಥಪಾಲಕನಾಗಿ ಕೆಲಸ ಮಾಡುತ್ತಿದ್ದರು. ಆದರೆ ಉದ್ಯೋಗ ಖಾಯಂ ಆಗದ ಕಾರಣ ಮನನೊಂದು ಆತ್ಮಹತ್ಯೆ ಯತ್ನಿಸಿದ್ದಾರೆ. ಸದ್ಯ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಸ್ಥಳಕ್ಕೆ ಡಿಸಿಪಿ ದೇವರಾಜು ಭೇಟಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಮಧ್ಯಾಹ್ನ 1.30ರ ವೇಳೆಗೆ ರೇವಣ್ಣ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ಚಿಂತಾಮಣಿ ತಾಲೂಕಿನ ಅನೂರು ಗ್ರಾಮ ಪಂಚಾಯತ್ ನಲ್ಲಿ ತಾತ್ಕಾಲಿಕ ಸಹಾಯಕ ಗ್ರಂಥಪಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಘಟನೆಯಿಂದ ಕೈ ಮತ್ತು ಕುತ್ತಿಗೆ ಮೇಲೆ ಗಾಯವಾಗಿದ್ದು, ಯಾವುದೇ ಪ್ರಾಣಾಪಾಯ ಇಲ್ಲ ಎಂದು ತಿಳಿಸಿದ್ದಾರೆ.

ಆತ್ಮಹತ್ಯೆ ಯತ್ನ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ಹರಿತವಾದ ಆಯುಧ ಸಿಕ್ಕಿಲ್ಲ. ಸ್ಥಳದಲ್ಲಿ ಆಧಾರ್ ಕಾರ್ಡ್, ಗುರುತಿನ ಚೀಟಿ ಸಿಕ್ಕಿದೆ. ಉದ್ಯೋಗ ನೇಮಕಾತಿ ಪತ್ರ ಕೂಡ ಸ್ಥಳದಲ್ಲಿ ದೊರಕಿದೆ. 6 ಸಾವಿರ ಜನ ತಾತ್ಕಾಲಿಕ ಲೈಬ್ರೇರಿಯನ್ ಗಳಿಗೆ ಕನಿಷ್ಠ ವೇತನ ನಿಗದಿ ಮಾಡುವ ಬಗ್ಗೆಯೂ ಮನವಿ ಪತ್ರ ಸಿಕ್ಕಿದೆ. ಪ್ರಕರಣ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಸೆಕ್ಷನ್ 309(ಆತ್ಮಹತ್ಯೆ ಯತ್ನ) ಅಡಿ ಪ್ರಕರಣ ದಾಖಲು ದಾಖಲಾಗಿದೆ. ತನಿಖೆ ಬಳಿಕ ಹೆಚ್ಚಿನ ವಿವರ ಸಿಗಲಿದೆ ಎಂದು ಹೇಳಿದ್ದಾರೆ.

ರೇವಣ್ಣ ಬೇಡಿಕೆ ಏನು?
ಆತ್ಮಹತ್ಯೆ ಯತ್ನಕ್ಕೂ ಮುನ್ನ ರೇವಣ್ಣ ಕುಮಾರ್ ಡೆತ್ ನೋಟ್ ಬರೆದಿದ್ದು, ಸಿಎಂ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ದಯಮಾಡಿ ಹಂಗಾಮಿ ನೌಕರನನ್ನು ಖಾತ್ರಿ ಪಡಿಸಿಕೊಳ್ಳಿ. ಉದ್ಯೋಗಿಯಾಗೋದು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸರ್ಕಾರದ ಗಮನ ಸೆಳೆಯಲು ರೇವಣ್ಣ ಈ ಆತ್ಮಹತ್ಯೆ ಯತ್ನ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ?
ರೇವಣ್ಣ ಸಾಕಷ್ಟು ದಿನದಿಂದ ಉದ್ಯೋಗ ಖಾತ್ರಿಗೆ ಓಡಾಡುತ್ತಾ ಇದ್ದರು. ಪ್ರಧಾನಮಂತ್ರಿಯಿಂದ ರಾಷ್ಟ್ರಪತಿ ವರೆಗೂ ಸಂಪರ್ಕ ಮಾಡಿದ್ದರೂ ನ್ಯಾಯ ಸಿಕ್ಕಿರಲಿಲ್ಲ. ನೀವಾದ್ರು ನ್ಯಾಯ ಕೊಡಿಸಿ ಎಂದು ಸಿಎಂ ಗೆ ಮನವಿ ಮಾಡಿಕೊಂಡಿದ್ದಾರೆ. ದಯವಿಟ್ಟು ನನ್ನ ಬಗ್ಗೆ ತಪ್ಪು ತಿಳಿಯಬೇಡಿ. 6 ಸಾವಿರ ಲೈಬ್ರರಿ ನೌಕರರ ಪ್ರತೀಕವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಸಾವು ಆತ್ಮಹತ್ಯೆ ಅಲ್ಲ. ಸರ್ಕಾರಕ್ಕೆ ನೀಡುತ್ತಿರುವ ಬಲಿದಾನ ಮಾನ್ಯ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಅನ್ಯತಾ ಭಾವಿಸಬಾರದು. ನಾವು ಎಷ್ಟೇ ಹೋರಾಟ ಮಾಡಿದರೂ ನಮಗೆ ನ್ಯಾಯ ಸಿಗುತ್ತಿಲ್ಲ. ನೀವಾದ್ರೂ ನ್ಯಾಯ ಕೊಡಿಸಿ. ಇದು ಸಾವಲ್ಲ ಬಲಿದಾನ ಎಂದು ಪತ್ರದಲ್ಲಿ ಬರೆದಿದ್ದಾರೆ.

ಮೆಟಲ್ ಡಿಟೆಕ್ಟರ್:
ವಿಧಾನಸೌಧದ ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಭಾರೀ ಅನುಮಾನಕ್ಕೀಡು ಮಾಡಿದೆ. ಯಾಕೆಂದರೆ ಕಳೆದ ಬಾರಿ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರ ಮೇಲೆ ಕಚೇರಿಯೊಳಗಡೆಯೇ ಚಾಕು ಇರಿಯಲಾಗಿತ್ತು. ಆ ಬಳಿಕ ಸರ್ಕಾರಿ ಕಚೇರಿಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿತ್ತು. ಅಲ್ಲದೆ ಪೊಲೀಸರ ಭದ್ರತೆಯನ್ನೂ ನಿಯೋಜಿಸಲಾಗಿತ್ತು. ಆದರೆ ಇದೀಗ ಶಾಸಕರು ಹಾಗೂ ಸಚಿವರು ಓಡಾಡುತ್ತಿರುವ ವಿಧಾನಸೌಧದಲ್ಲಿ ಇಷ್ಟೆಲ್ಲಾ ಭದ್ರತೆ ಇದ್ದರೂ ರೇವಣ್ಣ ಕುಮಾರ್ ಬ್ಲೇಡ್ ಕೊಂಡೊಯ್ದಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ.

ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಿಎಂ ಕಚೇರಿ ಸಮೀಪದಲ್ಲಿರುವ ಟಾಯ್ಲೆಟ್‍ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇವಣ್ಣ ಅವರನ್ನು ತಕ್ಷಣವೇ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

Comments

Leave a Reply

Your email address will not be published. Required fields are marked *