ನನಗಿರುವ ನೋವನ್ನು ನಿಮಗೆ ಹೇಳೋಕೆ ಆಗ್ತಿಲ್ಲ: ಸಿಎಂ

ರಾಮನಗರ: ನಾನು ಮುಖ್ಯಮಂತ್ರಿ ಇರಬಹುದು. ನನಗಿರುವ ನೋವನ್ನು ನಿಮಗೆ ಹೇಳಲು ಆಗುತ್ತಿಲ್ಲ. ನಾನೇ ನೋವು ಹೇಳಿಕೊಂಡರೆ ನೀವು ಏನು ಮಾಡುತ್ತೀರಿ ಎಂದು ಸಿಎಂ ತಮ್ಮ ದುಗುಡ ತೋಡಿಕೊಂಡಿದ್ದಾರೆ.

ಚನ್ನಪಟ್ಟಣದ ಜನತಾ ದರ್ಶನದಲ್ಲಿ ಮಾತನಾಡಿದ ಅವರು, ಸರ್ಕಾರವನ್ನು ಮುಂದಿನ ನಾಲ್ಕು ವರ್ಷ ಹೇಗೆ ನಡೆಸಬೇಕು ಎಂಬುದು ನನಗೆ ಗೊತ್ತಿದೆ. ಪಕ್ಕದ ಮಂಡ್ಯ, ಮೈಸೂರು, ತುಮಕೂರಿನ ಜನ ಅಪಾರ ಪ್ರೀತಿ ಕೊಟ್ಟರೂ ನನ್ನ ಅರ್ಥ ಮಾಡಿಕೊಳ್ಳಲಿಲ್ಲ ಎನ್ನುವ ನೋವಿದೆ ಅಂತ ನಿಖಿಲ್, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಸೋಲಿನ ನೋವನ್ನು ಪರೋಕ್ಷವಾಗಿ ಹೊರಹಾಕಿದರು.

ಕಂದಾಯ ಇಲಾಖೆಯಲ್ಲಿ ಹಲವಾರು ದೂರು ಬಂದಿದೆ. ಇಂದೇ ಇಬ್ಬರನ್ನು ಸಸ್ಪೆಂಡ್ ಮಾಡಬೇಕು ಅಂದುಕೊಂಡಿದ್ದೆ. ಆದರೆ ಕೊನೆಯದಾಗಿ ಎಚ್ಚರಿಕೆ ಕೊಡುತ್ತೇನೆ. ಒಂದು ತಿಂಗಳಲ್ಲಿ ಸರಿಪಡಿಸಿ. ಆಮೇಲೆ ಕಣ್ಣೀರು ಸುರಿಸುತ್ತ ಬರಬೇಡಿ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.

ನಾನು ಯಾವ ಅಧಿಕಾರಿಗಳಿಗೂ ಹಿಂಸೆ ಕೊಟ್ಟಿಲ್ಲ. ಅಗೌರವವಾಗಿ ನಡೆದುಕೊಂಡಿಲ್ಲ. ಮುಖ್ಯಮಂತ್ರಿ ಆಗಿದ್ದಾಗಲೂ ನನ್ನ ಕ್ಷೇತ್ರದ ಜನರಿಗೆ ತೊಂದರೆಯಾದರೆ ಹೇಗೆ? ಇಜ್ಜಲೂರು ಜಲಾಶಯ ಕಟ್ಟಿದ್ದು ಯಾರು ಎಂಬುದು ನಿಮಗೆ ಗೊತ್ತಿದೆ. ನಾನು ಅಧಿಕಾರಕ್ಕೆ ಬಂದ ಮೇಲೆ ಯಾವುದೋ ಕೆಲವು ಕೆರೆಗಳಿಗೆ ನೀರು ಕೊಡುತ್ತಿಲ್ಲ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೆರೆ ತುಂಬಿಸುವ ನಾಟಕ ಮುಗಿತು. ಅವರು ಕಳೆದ ವರ್ಷ ಎಷ್ಟು ಕೆರೆಗೆ ನೀರು ಹರಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಏತನೀರಾವರಿ ಯೋಜನೆ ಮೂಲಕ ಶಾಶ್ವತ ನೀರು ಸಿಗುವುದಿಲ್ಲ. ಕಾವೇರಿ ನಿರ್ವಹಣ ಮಂಡಳಿ ನೀರಿನ ಬಗ್ಗೆ ನಿಗಾ ಇಟ್ಟಿದೆ. ಏತನೀರಾವರಿ ಯೋಜನೆ ತಾತ್ಕಾಲಿಕವಾದ ಯೋಜನೆ. ಅದಕ್ಕಾಗಿ ಸತ್ತೆಗಾಲದಿಂದ ಗುರುತ್ವಾಕರ್ಷಣೆಯ ಮೂಲಕ ಇಗ್ಗಲೂರು ಬ್ಯಾರೇಜ್‍ಗೆ ನೀರು ಹರಿಸುತ್ತೇವೆ. ನನ್ನ ಬಗ್ಗೆ ಅನುಮಾನ ಬೇಡ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ಚನ್ನಪಟ್ಟಣ ಕ್ಷೇತ್ರದ ಜನತೆಗೆ ಭರವಸೆ ನೀಡಿದರು.

ಅಕ್ಕೂರು ವ್ಯಾಪ್ತಿಯ 931 ರೈತರಿಗೆ 4 ಕೋಟಿ 34 ಲಕ್ಷ ರೂ. ಸಾಲಮನ್ನಾದ ಋಣಮುಕ್ತ ಪತ್ರ ನೀಡಿದರು. ಈ ಮಧ್ಯೆ ಅಂತ್ಯಸಂಸ್ಕಾರಕ್ಕೆ ಬರುವಂತೆ ಸಿಎಂ ಆಹ್ವಾನಿಸಿ ಮಂಡ್ಯದ ಕೆ.ಆರ್. ಪೇಟೆ ತಾಲೂಕಿನ ಸಂತೇಬಾಚಳ್ಳಿ ಹೋಬಳಿಯ ಅಘಲಯ ಗ್ರಾಮದ 45 ವರ್ಷದ ರೈತ ಸುರೇಶ್ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನು ಪ್ರಸ್ತಾಪಿಸಿದ ಸಿಎಂ, ಇದು ನೋವಿನ ವಿಷಯ. ಯಾವ ರೈತರೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿಕೊಂಡರು.

Comments

Leave a Reply

Your email address will not be published. Required fields are marked *