ಡ್ರೋನ್ ಕಣ್ಣಲ್ಲಿ ಮುಳ್ಳಯ್ಯನಗಿರಿಯ ದೃಶ್ಯಕಾವ್ಯದ ಸೊಬಗನ್ನ ನೋಡಿ ಕಣ್ತುಂಬಿಕೊಳ್ಳಿ

ಚಿಕ್ಕಮಗಳೂರು: ಒಂದೇ ಬೆಟ್ಟ-ಗುಡ್ಡ ಆದರೆ ನೋಡೋ ಶೈಲಿ ಮಾತ್ರ ಹತ್ತಾರು. ಒಂದೇ ದಾರಿ, ಕೊಡೋ ಅನುಭವ ಭಿನ್ನ-ವಿಭಿನ್ನ. ಒಂದೇ ಪ್ರಕೃತಿ ಆದ್ರೆ, ಗೋಚರವಾಗೋ ರೀತಿ ನೂರಾರು. ಹೀಗೆ ಡ್ರೋನ್ ಕಣ್ಣಲ್ಲಿ ಸುಂದರ ಮುಳ್ಳಯ್ಯನಗಿರಿಯ ದೃಶ್ಯಕಾವ್ಯದ ಸೊಬಗನ್ನ ನೋಡಿದವರು ಎಷ್ಟು ಚಂದ ಪ್ರಕೃತಿಯ ಅಂದ ಎನ್ನುತ್ತಿದ್ದಾರೆ.

ಹೌದು. ಭಾವನೆಗೆ ಬಿಟ್ಟಂತೆ ಲಕ್ಷಾಂತರ ಕಲ್ಪನೆಗಳು ಇವೆ. ಹೀಗೆ ನೋಡುಗನ ಕಲ್ಪನೆಗಳಿಗೆಲ್ಲಾ ಜೀವ ತುಂಬಿ, ಹಸಿರನ್ನೆ ಮೈದುಂಬಿಸಿಕೊಂಡು ತುಂಬು ಮುತ್ತೈದೆಯಂತೆ ಹಚ್ಚ-ಹಸಿರಿನಿಂದ ಕಂಗೊಳಿಸೋ ಕಾಫಿನಾಡಿನ ಪ್ರಕೃತಿ ಸೌಂದರ್ಯಕ್ಕೆ ಸರಿಸಾಟಿಯಾದದ್ದು ಮತ್ತೊಂದಿದ್ಯಾ ಅಂದರೆ, ಇದೆ ಅನ್ನೋರು ಯಾರೂ ಸಿಗಲ್ಲ. ಅದರಲ್ಲೂ, ಮಳೆಗಾಲದಲ್ಲಿ ಮಲೆನಾಡು ನವವಧುವಿನಂತೆ ನೈಸರ್ಗಿಕ ಸೊಬಗನ್ನೆ ಮುಡಿಯ ಮಲ್ಲಿಗೆಯನ್ನಾಗಿಸಿಕೊಂಡಂತೆ ಭಾಸವಾಗುತ್ತೆ.

ಹೀಗೆ ಅಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಕಾಫಿನಾಡಿನ ಮುಳ್ಯಯನಗಿರಿ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿಲ್ಲ, ಬದಲಾಗಿ ತನ್ನ ಸೌಂದರ್ಯದಿಂದಲೇ ಅವರನ್ನು ತನ್ನತ್ತ ಬರುವಂತೆ ಆಗ್ರಹಿಸುತ್ತಿದೆ. ಸಮುದ್ರಮಟ್ಟದಿಂದ 6 ಸಾವಿರ ಅಡಿಗೂ ಹೆಚ್ಚು ಎತ್ತರದಲ್ಲಿರೋ ಈ ಪರ್ವತದ ಸವಿಯನ್ನ ಸವಿಯಲು ಗಿರಿಗೆ ಪ್ರತಿನಿತ್ಯ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಸಮೃದ್ಧ ಮಳೆಯಿಂದ ಗಿರಿಶಿಖರಗಳಲ್ಲಿ ಹಸಿರು ಹಾಸಿದೆ. ಗಿಡ ಮರಗಳು ಚಿಗುರೊಡೆದು ಹಸಿರಿನಿಂದ ನಳನಳಿಸುತ್ತಿದ್ದರೆ, ಹಕ್ಕಿ-ಪಕ್ಷಿಗಳ ನಿನಾದ ಕೇಳೋರೆ ಪುಣ್ಯವಂತರು.

ಅಂತಹಾ, ಅದ್ಭುತ, ಅನನ್ಯ ಪ್ರಕೃತಿಯ ಸೌಂದರ್ಯವನ್ನು ಹೇಳೋಕೆ ಪದ ಸಾಲದು. ಬರೆಯೋಕೆ ಪುಟ ಸಾಲದಂತ ಮುಳ್ಳಯ್ಯನಗಿರಿಯ ದೃಶ್ಯ ವೈಭವದ ಕಾವ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರಕೃತಿಯ ನೈಜ ಚಿತ್ರಣಕ್ಕೆ ಸರಿಸಾಟಿ ಇಲ್ಲದಂತಾಗಿದೆ. ಈ ವೀಡಿಯೋ ನೋಡಿದವರು ನಿಜಕ್ಕೂ ನಿಸರ್ಗದ ಸುಂದರ ನೋಟಕ್ಕೆ ಮನ ಸೋತಿದ್ದಾರೆ.

Comments

Leave a Reply

Your email address will not be published. Required fields are marked *