ಮುಂಗಾರು ಎಫೆಕ್ಟ್ – ಮಲ್ಪೆ ಬೀಚ್ ಸಂಪೂರ್ಣ ಅಸ್ತವ್ಯಸ್ತ

ಉಡುಪಿ: ವಾಯು ಚಂಡಮಾರುತ ಮತ್ತು ಉಡುಪಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಮಲ್ಪೆ ಬೀಚ್‍ಗೆ ಬರುವ ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ. ಮಲ್ಪೆ ಬೀಚ್ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನೀರಿಗಿಳಿಯದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಮಲ್ಪೆ ಎಂಬ ಸುಂದರ ಬೀಚ್ ಕಸಕಡ್ಡಿ, ಮರದ ದಿಮ್ಮಿ, ಪ್ಲಾಸ್ಟಿಕ್ ಬಾಟಲಿ, ಸೊಪ್ಪಿನಿಂದ ತುಂಬಿಕೊಂಡಿದ್ದು ಕುರೂಪವಾಗಿದೆ. ಕಡಲ ಅಬ್ಬರ ಜೋರಾಗಿರುವುದರಿಂದ ಪ್ರವಾಸಿಗರು ಸಮುದ್ರಕ್ಕೆ ಇಳಿಯಬಾರದೆಂದು ಬೀಚ್ ಸಿಬ್ಬಂದಿ ಸೂಚನೆ ಹೊರಡಿಸಿದ್ದಾರೆ.

ನೀರಾಟ ಆಡಲು ಬಂದ ಶಿವಮೊಗ್ಗ, ಹಾವೇರಿ, ಬೆಂಗಳೂರು ಪ್ರವಾಸಿಗರಿಗೆ ನಿರಾಸೆಯಾಗಿದೆ. ಪ್ರಕ್ಷುಬ್ಧ ಕಡಲು ಪ್ರವಾಸಿಗರಲ್ಲಿ ಭೀತಿ ಹುಟ್ಟಿಸಿದೆ. ನೀರಿಗಿಳಿಯದೆ ಜನ ಸಮುದ್ರವನ್ನು ತೀರದಿಂದ ನೋಡಿ ವಾಪಸ್ಸಾಗಿದ್ದಾರೆ.

ಶಿವಮೊಗ್ಗದ ಸುಂದರೇಶ್ ಮತ್ತು ಗೆಳೆಯರು ಮಾತನಾಡಿ, ನಾವು ಬೀಚಲ್ಲಿ ಎಂಜಾಯ್ ಮಾಡಬೇಕು ಅಂತ ಬಂದಿದ್ದೇವೆ. ಆದರೆ ನೀರಿಗೆ ಇಳಿಯುವುದಕ್ಕೆ ಬಿಡುತ್ತಿಲ್ಲ. ಕಡಲಿನ ಆರ್ಭಟ ಏನು ನ್ನುವುದು ಗೊತ್ತಾಗಿದೆ. ಕಳೆದ ರಾತ್ರಿಯಿಂದ ಇವತ್ತು ಬೆಳಗ್ಗೆ ತನಕದ ಜರ್ನಿಯಲ್ಲಿ ನಿರಂತರ ಮಳೆ ನೋಡಿದೆವು. ಮಳೆಯ ಜರ್ನಿ ಖುಷಿ ಕೊಟ್ಟಿದೆ ಎಂದು ಹೇಳಿದರು.

ಇನ್ನೂ ಉಡುಪಿ ಜಿಲ್ಲೆಯಲ್ಲಿ ಅಬ್ಬರದ ಮುಂಗಾರು ಪ್ರವೇಶವಾಗಿದ್ದು, ಮಲ್ಪೆ ಕಡಲ ತೀರದತ್ತ ದೊಡ್ಡ ದೊಡ್ಡ ಅಲೆಗಳು ಅಪ್ಪಳಿಸುತ್ತಿದೆ. ಸಾಮಾನ್ಯವಾಗಿ ಜುಲೈ ತಿಂಗಳ ವಿಪರೀತ ಮಳೆ ಸಂದರ್ಭ 100 ಮಿಲಿಮೀಟರ್ ಮಳೆಯಾಗುವುದು ವಾಡಿಕೆ. ಆದರೆ ಮೊದಲ ಮಳೆಯೇ 120 ಮಿಲಿಮೀಟರ್ ದಾಟಿದೆ. ಈ ಮೂಲಕ ಮುಂಗಾರು ಒಂದು ಹಂತದ ನೀರಿನ ಬರ ನೀಗಿಸಿದೆ. ಜಿಲ್ಲೆಯಾದ್ಯಂತ ಸುರಿದ ಮಳೆಗೆ ನಗರದ ಹಳ್ಳಕೊಳ್ಳಗಳು ತುಂಬಿ ಹರಿದಿದೆ. ರಸ್ತೆಗಳಲ್ಲಿ, ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ.

Comments

Leave a Reply

Your email address will not be published. Required fields are marked *