ಜಿಂದಾಲ್ ಡೀಲ್‍ನಿಂದ ಹಿಂದೆ ಸರಿದ ರಾಜ್ಯ ಸರ್ಕಾರ

ಬೆಂಗಳೂರು: ಜಿಂದಾಲ್ ಸಂಸ್ಥೆಗೆ 3,666 ಎಕರೆ ಭೂಮಿ ನೀಡುವ ಸಂಬಂಧ ಸಂಪುಟ ಸಭೆಯಲ್ಲಿ ಕೈಗೊಂಡಿದ್ದ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದ್ದು, ಬಿಜೆಪಿ ಮತ್ತು ಹೆಚ್‍ಕೆ ಪಾಟೀಲ್ ಒತ್ತಡಕ್ಕೆ ತಲೆಬಾಗಿ ಜಿಂದಾಲ್‍ಗೆ ಭೂಮಿ ನೀಡಿಕೆ ಆದೇಶವನ್ನು ಹಿಂಪಡೆಯಲು ನಿರ್ಧರಿಸಿದೆ.

ಭೂಮಿ ನೀಡುವ ಪ್ರಸ್ತಾಪವನ್ನು ಸಂಪುಟದಲ್ಲಿ ಮತ್ತೆ ಚರ್ಚಿಸಿ ನಿರ್ಧಾರ ಕೈಗೊಳ್ಳಾಗುವುದಾಗಿ ಸಿಎಂ ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ. ಇಂದು ಜಾರ್ಜ್ ಜೊತೆಗಿನ ಸಭೆ ಬಳಿಕ ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸಂಪುಟ ಸಭೆಯಲ್ಲಿ ಮತ್ತೊಮ್ಮೆ ಮಂಡನೆ ಮಾಡಲು ಜಾರ್ಜ್ ಅವರಿಗೆ ಸೂಚಿಸಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ನಡೆದ ಸಂಪುಟ ಸಭೆಯಲ್ಲಿ ಜಿಂದಾಲ್‍ಗೆ ಭೂಮಿ ನೀಡುವ ಕುರಿತು ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. ಆದರೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಎಚ್‍ಕೆ ಪಾಟೀಲ್ ಅವರೇ ಸಂಪುಟ ಸಭೆಯ ನಿರ್ಧಾರವನ್ನು ಬಹಿರಂಗವಾಗಿ ಪ್ರಶ್ನಿಸಿ ವಿರೋಧ ವ್ಯಕ್ತಪಡಿಸಿದ್ದರು. ಪಾಟೀಲ್ ಅವರ ವಿರೋಧದ ಹೇಳಿಕೆ ಜಿಂದಾಲ್ ಭೂಮಿ ನೀಡುವ ಬಗ್ಗೆ ಭಾರೀ ಚರ್ಚೆ ಹುಟ್ಟು ಹಾಕಿತ್ತು, ಅಲ್ಲದೇ ವಿರೋಧ ಪಕ್ಷದ ನಾಯಕರಿಂದಲೂ ಸಿಎಂ ಕುಮಾರಸ್ವಾಮಿ ಸರ್ಕಾರ ವಿರುದ್ಧ ಕಿಕ್ ಬ್ಯಾಕ್ ಆರೋಪ ಕೇಳಿ ಬಂದಿತ್ತು.

ಜಿಂದಾಲ್ ವಿವಾದ ಕಾಂಗ್ರೆಸ್ ನಾಯಕರ ನಡುವೆಯೇ ಅಸಮಾಧಾನಕ್ಕೆ ಕಾರಣವಾಗಿತ್ತು. ನಾಯಕರ ಅಸಮಾಧಾನ ಹೈಕಮಾಂಡ್ ಅವರೆಗೂ ಕೂಡ ತಲುಪಿತ್ತು. ಇದರ ನಡುವೆಯೇ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರು ಕೆಜೆ ಜಾರ್ಜ್ ಹಾಗೂ ಎಚ್‍ಕೆ ಪಾಟೀಲ್ ನಡುವೆ ಸಂಧಾನ ಸಭೆಯನ್ನ ನಡೆಸಿದ್ದರು. ಆದರೆ ಈ ಸಭೆಯೂ ಯಶಸ್ವಿ ಆಗದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಕುಮಾರಸ್ವಾಮಿ ಇಬ್ಬರ ನಡುವೆ ಮಾತುಕತೆ ನಡೆಸಿದ್ದರು.

ಜಿಂದಾಲ್‍ಗೆ ಭೂಮಿ ನೀಡುವ ವಿಷಯಗಳಲ್ಲಿ ಗೊಂದಲ ಇರುವ ಹಿನ್ನೆಲೆ, ಭೂಮಿ ನೀಡಿಕೆ ವಾಪಾಸ್ ಪಡೆದು ಪರಿಶೀಲನೆ ಬಳಿಕ ಸಂಪುಟದಲ್ಲಿ ಪುನರ್ ಮಂಡನೆ ಮಾಡಲು ಸಿಎಂ ಸೂಚನೆ ನೀಡಿದ್ದಾರೆ. ಇತ್ತ ಜಿಂದಾಲ್ ವಿಚಾರವಾಗಿ ಎಚ್.ಕೆ.ಪಾಟೀಲ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *