ಬಿರುಗಾಳಿ ಸಹಿತ ಭಾರೀ ಮಳೆ – ಶಾಲೆಗೆ ಆಗಮಿಸಿದ ವಿದ್ಯಾರ್ಥಿ, ಶಿಕ್ಷಕರು ಶಾಕ್

– ಧರೆಗುರುಳಿತು 160 ವರ್ಷದ ಹಳೆಯ ಬೃಹತ್ ಆಲದ ಮರ

ಬೆಂಗಳೂರು/ವಿಜಯಪುರ: ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಸೇರಿದಂತೆ, 20ಕ್ಕೂ ಅಧಿಕ ವಿದ್ಯುತ್ ಕಂಬ, ಟಿಸಿ ಜಖಂಗೊಂಡಿದೆ.

ನೆಲಮಂಗಲ ತಾಲೂಕಿನ ಕುಲವನಹಳ್ಳಿ ಗ್ರಾಮ ಪಂಚಾಯ್ತಿ ಭಾಗದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಗೋವೇನಹಳ್ಳಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದ್ದು, ಇಂದು ಬೆಳಗ್ಗೆ ಕ್ಲಾಸ್‍ಗೆ ಆಗಮಿಸಿದ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಕ್ ಆಗಿದ್ದಾರೆ.

ಶಾಲೆಯಿಂದ ಹೊರಗೆ ನಿಂತು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲಾ ಕಟ್ಟಡ ವೀಕ್ಷಿಸುತ್ತಿದ್ದಾರೆ. ತಾಳೇಕೆರೆ, ತಿಪ್ಪಗೊಂಡನಹಳ್ಳಿ ಗ್ರಾಮದಲ್ಲಿ 20ಕ್ಕೂ ಅಧಿಕ ಕಂಬಗಳು ನೆಲಕ್ಕುರುಳಿದೆ. ಅರೇಬೊಮ್ಮನಹಳ್ಳಿ ಗ್ರಾಮದಲ್ಲಿ ಎರಡು ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಳಾಗಿದೆ. ಅಲ್ಲದೆ ಹಲವಾರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ವ್ಯತ್ಯಯ ಆಗಿದೆ. ವಿದ್ಯುತ್ ಸರಿಪಡಿಸಲು ಬೆಸ್ಕಾಂ ಇಲಾಖೆಯ ಲೈನ್ ಮ್ಯಾನ್‍ಗಳು ಹರಸಾಹಸ ಪಡುತ್ತಿದ್ದಾರೆ.

ಇತ್ತ ವಿಜಯಪುರ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗಿದೆ. ತಡರಾತ್ರಿ ಗುಡುಗು ಸಹಿತ ಮಳೆ ಸುರಿದಿದ್ದು, ಮಳೆ ರಭಸಕ್ಕೆ ಜಿಲ್ಲೆ ನಾಲತವಾಡ ಪಟ್ಟಣದಲ್ಲಿ 160 ವರ್ಷದ ಹಳೆಯ ಬೃಹತ್ ಆಲದ ಮರ ಉರುಳಿದೆ. ಬೃಹತ್ ಆಲದ ಮರ ಹಳೆ ಪಂಚಾಯ್ತಿ ಕಟ್ಟಡದ ಮೇಲೆ ಉರುಳಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ.

Comments

Leave a Reply

Your email address will not be published. Required fields are marked *