ಮಾಲ್ಡೀವ್ಸ್, ಶ್ರೀಲಂಕಾಕ್ಕೆ ಮೋದಿ ಮೊದಲ ಪ್ರವಾಸ – ವಯನಾಡಲ್ಲಿ 2ನೇ ದಿನ ರಾಹುಲ್ ರೋಡ್‍ಶೋ

ನವದೆಹಲಿ: ಎರಡನೇ ಬಾರಿಗೆ, ಪ್ರಧಾನಿ ಆದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಇಂದು ವಿದೇಶ ಪ್ರವಾಸ ಆರಂಭಿಸಲಿದ್ದು ದ್ವೀಪರಾಷ್ಟ್ರ ಮಾಲ್ಡೀವ್ಸ್‍ಗೆ ಭೇಟಿ ನೀಡುತ್ತಿದ್ದಾರೆ.

ಮಾಲ್ಡೀವ್ಸ್ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ, ಅಲ್ಲಿನ ರಾಷ್ಟ್ರಾಧ್ಯಕ್ಷ ಇಬ್ರಾಹಿಂ ಸೊಲಿತ್ ಜೊತೆ ಮಾತುಕತೆ ನಡೆಸುತ್ತಾರೆ. ಭಾರತದ ನೆರವಿನಿಂದ ಶುರುವಾಗಿರುವ ಕಾಮಗಾರಿಗಳ ಉದ್ಘಾಟನೆಯ ಜೊತೆಗೆ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೂ ಮೋದಿ ಹಣಕಾಸು ನೆರವು ಘೋಷಿಸುವ ಸಾಧ್ಯತೆ ಇದೆ.

ಮಾಲ್ಡೀವ್ಸ್‍ನಿಂದ ನಾಳೆ ದ್ವೀಪರಾಷ್ಟ್ರ ಶ್ರೀಲಂಕಾಕ್ಕೆ ಭೇಟಿ ನೀಡುತ್ತಾರೆ. ಈಸ್ಟರ್ ಸಂಡೆಯಂದು ನಡೆದಿದ್ದ ಸರಣಿ ಬಾಂಬ್ ಸ್ಫೋಟದ ಬಳಿಕ ಆ ರಾಷ್ಟ್ರಕ್ಕೆ ಭೇಟಿ ನೀಡುತ್ತಿರುವ ವಿಶ್ವದ ಮೊದಲ ನಾಯಕ ಮೋದಿ. ಜಪಾನ್ ಜೊತೆಗೆ ಲಂಕಾದಲ್ಲಿ ಬಂದರು ಅಭಿವೃದ್ಧಿಗೆ ಭಾರತದ ಪಾಲುದಾರಿಕೆಗೆ ಸಹಿ ಹಾಕುವ ಸಾಧ್ಯತೆ ಇದೆ.

ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯ ಕಡಿವಾಣದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯ ಚೊಚ್ಚಲ ವಿದೇಶ ಪ್ರವಾಸ ಮಹತ್ವ ಪಡೆದಿದೆ. ವಿದೇಶ ಪ್ರವಾಸಕ್ಕೂ ಮೊದಲು ಇಂದು ಬೆಳಗ್ಗೆ ಗುರುವಾಯೂರಲ್ಲಿರುವ ಪ್ರಸಿದ್ಧ ಶ್ರೀಕೃಷ್ಣನ ದೇವಸ್ಥಾನಕ್ಕೆ ಮೋದಿ ಭೇಟಿ ನೀಡಿ, ದೇವಸ್ಥಾನದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡೋದರ ಜೊತೆಗೆ ಹೆಲಿಪ್ಯಾಡ್‍ನ್ನು ಉದ್ಘಾಟಿಸಲಿದ್ದಾರೆ.

ಇತ್ತ ಅಮೇಥಿಯಲ್ಲಿ ಸೋಲಿಸಿದರೂ ಅದ್ಭುತ ಗೆಲುವು ಕೊಟ್ಟ ಕೇರಳದಲ್ಲಿ ರಾಹುಲ್ ಇಂದು 2ನೇ ದಿನದ ಪ್ರವಾಸ ಕೈಗೊಳ್ಳಲಿದ್ದಾರೆ. ತಮ್ಮ ಹೊಸ ಕ್ಷೇತ್ರ ವಯನಾಡಲ್ಲಿ ರೋಡ್ ಶೋ ಜೊತೆಗೆ ಸನ್ಮಾನವನ್ನೂ ಸ್ವೀಕರಿಸಲಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಅಧ್ಯಕ್ಷ ಸ್ಥಾನದಿಂದ ರಾಹುಲ್ ಗಾಂಧಿ ಇಳಿಯೋದು ಸರಿಯಲ್ಲ, ಬದಲಿಗೆ ಪಕ್ಷದಲ್ಲಿ ಎದ್ದಿರುವ ಬೆಂಕಿಯನ್ನ ಆರಿಸಬೇಕು ಎಂದು ಚಿಕ್ಕಬಳ್ಳಾಪುರ ಮಾಜಿ ಸಂಸದ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯನ್ನ ಖಾಲಿ ಇಡಲು ಸಾಧ್ಯವಿಲ್ಲ. ಅಧ್ಯಕ್ಷರು ಕಾರ್ಯಪ್ರವೃತ್ತರಾಗಿ ಯುದ್ಧೋಪಾದಿಯಲ್ಲಿ ಪಕ್ಷದಲ್ಲಿ ಶಿಸ್ತು ತರಬೇಕು. ಒಂದು ವೇಳೆ ರಾಜೀನಾಮೆ ಕೊಡಬೇಕು ಎಂದು ಅನಿಸಿದರೂ ಅದಕ್ಕಿದು ಸಮಯವಲ್ಲ. ಸೋಲಿಗೆ ಕಾರಣವಾದ ರಾಜ್ಯ ನಾಯಕರ ಮೇಲೆ ಕ್ರಮಕೈಗೊಳ್ಳಬೇಕು. ಅದು ಅವರ ಕರ್ತವ್ಯ ಅಂತ ಮೊಯ್ಲಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *