ಹೆಸರಿಗೆ ಮಾತ್ರ ಬಯಲುಮುಕ್ತ ಗ್ರಾಮ- ಇಲ್ಲಿ ಶೌಚಾಲಯವೂ ಇಲ್ಲ, ಜನರ ಪರದಾಟವೂ ತಪ್ಪಿಲ್ಲ

ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯನ್ನು ಕಳೆದ ವರ್ಷ ಬಯಲುಮುಕ್ತ ಶೌಚಾಲಯ ಜಿಲ್ಲೆ ಎಂದು ಘೋಷಿಸಲಾಗಿದೆ. ಆದರೆ ಅದು ಅಧಿಕಾರಿಗಳ ಘೋಷಣೆಯಲ್ಲಷ್ಟೇ ಬಯಲು ಮುಕ್ತ ಶೌಚಾಲಯ ಜಿಲ್ಲೆಯಾಗಿದೆ.

ಹೌದು. ರಾಮನಗರ ತಾಲೂಕಿನ ಕೂಟಗಲ್ ಸಮೀಪದ ತಿಗಳರದೊಡ್ಡಿ ಗ್ರಾಮಸ್ಥರು ಇಲ್ಲಿಯ ತನಕ ಗ್ರಾಮದಲ್ಲಿ ಒಂದು ಶೌಚಾಲಯವನ್ನೂ ಕಂಡಿಲ್ಲ. ಅಲ್ಲದೆ ಗುಡಿಸಲು ಮುಕ್ತ ರಾಜ್ಯದ ಕಲ್ಪನೆಯಲ್ಲೂ ಸಹ ಈ ಗ್ರಾಮಕ್ಕೆ ಯಾವುದೇ ಪ್ರಯೋಜನವಾಗದೆ ಗುಡಿಸಲುಗಳಲ್ಲೇ ಜನ ವಾಸವಾಗಿದ್ದಾರೆ. ಶೌಚಾಲಯಕ್ಕೆ ಬಯಲನ್ನೇ ಆಧಾರವಾಗಿಸಿಕೊಂಡಿದ್ದು ಪುರುಷರು ಹೇಗೋ ಕಾಲ ಕಳೆದರೆ. ಕತ್ತಲಾಗುವುದನ್ನು ಕಾಯ್ದುಕೊಂಡೇ ಮಹಿಳೆಯರು ಶೌಚಾಲಯಕ್ಕೆ ಹೋಗಬೇಕು. ಹೀಗಾಗಿ ರಾಮನಗರ ಹೆಸರಿಗೆ ಮಾತ್ರ ಬಯಲುಮುಕ್ತ ಜಿಲ್ಲೆಯಾಗಿದೆ.

ಅಲ್ಲದೆ ಶೌಚಕ್ಕೆ ಜಮೀನುಗಳಿಗೆ ಹೋದರೆ ಅದರ ಮಾಲೀಕರು ಬೈಯುತ್ತಾರೆ. ಕತ್ತಲಾದ ಮೇಲೆ ಹೋಗಬೇಕಾದರೆ ಕಾಡು ಪ್ರಾಣಿಗಳು ಯಾವಾಗ ದಾಳಿ ಮಾಡುತ್ತವೋ ಎನ್ನುವ ಆತಂಕದಲ್ಲಿಯೇ ಬಯಲಿಗೆ ಹೋಗಬೇಕು. ಯಾರೇ ಬಂದರೂ ಅಷ್ಟೇ, ಕೇವಲ ಭರವಸೆಗಳನ್ನ ನೀಡಿ ಹೋಗುತ್ತಾರೆ. ಆದರೆ ಯಾರೂ ಕೂಡ ನಮಗೆ ನೆರವಾಗುತ್ತಿಲ್ಲ, ಗ್ರಾಮದ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಸ್ಥಳೀಯ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇಷ್ಟೆಲ್ಲ ಸಮಸ್ಯೆಗಳು ಇದ್ದರೂ ತಿಗಳರದೊಡ್ಡಿ ಗ್ರಾಮವನ್ನು ಯಾವ ಆಧಾರದ ಮೇಲೆ ಬಯಲು ಮುಕ್ತ ಗ್ರಾಮವನ್ನಾಗಿ ಅಧಿಕಾರಿಗಳು ಘೋಷಿಸಿದ್ದಾರೋ ಗೊತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *