ಪೊಲೀಸರ ವಶದಲ್ಲಿದ್ದ ವ್ಯಕ್ತಿ ಲಾಕಪ್ ಡೆತ್

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕು ಹೊಳೆಹೊನ್ನೂರು ಠಾಣೆ ಪೊಲೀಸರ ವಶದಲ್ಲಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

ಭದ್ರಾವತಿ ತಾಲೂಕು ಆಗರದಹಳ್ಳಿ ಕ್ಯಾಂಪಿನ ಬಾಲೇಶ್ ಪೊಲೀಸರ ವಶದಲ್ಲಿ ಮೃತಪಟ್ಟ ವ್ಯಕ್ತಿ. ಪೊಲೀಸರು ಸಿಕ್ಕಾಪಟ್ಟೆ ಹೊಡೆದಿದ್ದಾರೆ. ಇದರಿಂದಾಗಿಯೇ ಬಾಲೇಶ್ ಮೃತಪಟ್ಟಿದ್ದಾನೆ ಎಂದು ಅವರ ಸಂಬಂಧಿಗಳು ದೂರಿದ್ದಾರೆ. ಆದರೆ ಈ ವಿಷಯಕ್ಕೆ ಪ್ರತಿಕ್ರಿಯೆ ನೀಡಲು ಜಿಲ್ಲಾರಕ್ಷಣಾಧಿಕಾರಿ ಡಾ.ಅಶ್ವಿನಿ ನಿರಾಕರಿಸಿದ್ದಾರೆ.

ಗುರುವಾರ ಮಧ್ಯಾಹ್ನ ಹೊಳೆಹೊನ್ನೂರು ಠಾಣೆ ಪೊಲೀಸರು ಶಿವಮೊಗ್ಗ ಎಸ್‍ಪಿ ಕಚೇರಿಗೆ ಬಾಲೇಶ್‍ನನ್ನು ಕರೆತಂದಿದ್ದರು. ರಾತ್ರಿ ಸುಮಾರು 9.30ಕ್ಕೆ ಮನೆಯವರಿಗೆ ಕರೆ ಮಾಡಿ ಮೆಗ್ಗಾನ್ ಆಸ್ಪತ್ರೆಗೆ ಬರಲು ಹೇಳಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ಬಂದಾಗ ಬಾಲೇಶ್ ಮೃತಪಟ್ಟಿರುವುದನ್ನು ನೋಡಿ ಕುಟುಂಬಸ್ಥರಿಗೆ ಶಾಕ್ ಆಗಿದೆ. ಬಾಲೇಶ್ ಸಾವಿಗೆ ಪೊಲೀಸರೇ ಕಾರಣ ಅಂತ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೂಜಾಡುತ್ತಾರೆ ಎಂದು ಬಾಲೇಶ್ ಅವರನ್ನು ಹೊಳೆಹೊನ್ನೂರು ಪೊಲೀಸರು ಕರೆದೊಯ್ದಿದ್ದರು. ಮೊದಲು ಹೊಳೆಹೊನ್ನೂರು ಠಾಣೆಗೆ ನಂತರ ಶಿವಮೊಗ್ಗ ಡಿಆರ್ ಗ್ರೌಂಡ್‍ಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ. ಅಶ್ವಿನಿ ಅವರ ಸಮ್ಮುಖದಲ್ಲೇ ಬಾಲೇಶ್ ಸೇರಿದಂತೆ ಇನ್ನಿತರರಿಗೆ ಲಾಠಿ ಏಟು ನೀಡಲಾಗಿದೆ. ಈ ವೇಳೆ ಬಾಲೇಶ್ ಕುಸಿದು ಬಿದ್ದಿದ್ದನು ಎಂದು ಬಾಲೇಶ್ ಆಪ್ತರು ಮಾಹಿತಿ ನೀಡಿದ್ದಾರೆ.

ಪೊಲೀಸರು ಮೃತ ದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆದರೆ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ ಪೊಲೀಸರು ಅಲ್ಲಿ ಯಾವುದೇ ಸಹಿ ಮಾಡದೆ ಹೋಗಿದ್ದಾರೆ. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಪ್ರಕರಣವನ್ನು ತಿರುಚಲು ಯತ್ನಿಸಿದ್ದಾರೆ. ಬಾಲೇಶ್ ಕುಟುಂದವರು ಬರುತ್ತಿದ್ದಂತೆ ಆಸ್ಪತ್ರೆಯಿಂದ ಜಾಗ ಖಾಲಿ ಮಾಡಿದ್ದಾರೆ. ಇಡೀ ಪ್ರಕರಣದಲ್ಲಿ ಪೊಲೀಸರ ನಡೆ ಸಂಶಯಾಸ್ಪದವಾಗಿದೆ. ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ ಎಂದು ಮೃತನ ಸಂಬಂಧಿ ಅನಿಲ್ ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *