ಮೇವು ವಿತರಣೆಗೆ ಎಂಎಲ್‍ಎ ಬರಬೇಕು – ಬರದಿಂದ ತತ್ತರಿಸುತ್ತಿದ್ರು ಅಧಿಕಾರಿಗಳ ದರ್ಬಾರ್

ಚಿಕ್ಕಬಳ್ಳಾಪುರ: ಜಿಲ್ಲೆಯ ಜನ ಬರಗಾಲದಿಂದ ನೀರಿಲ್ಲದೇ ಪರದಾಡುತ್ತಿದ್ದು, ಇತ್ತ ರೈತರು ಜಾನುವಾರುಗಳಿಗೆ ಕನಿಷ್ಟ ಮೇವು ನೀಡಲಾಗದ ದುಸ್ಥಿತಿ ಎದುರಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಸರ್ಕಾರದಿಂದ ಬಂದಿರುವ ಮೇವನ್ನು ವಿತರಣೆ ಮಾಡಲು ಕುಂಟು ನೆಪ ಹೇಳುತ್ತಿದ್ದಾರೆ.

ಜಿಲ್ಲಾಡಳಿತ ಕಳೆದ ಎರಡು ದಿನಗಳ ಹಿಂದೆಯೇ ಜಾನುವಾರುಗಳಿಗೆ ಮೇವು ಸರಬರಾಜು ಮಾಡಲು ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹೋಬಳಿಗೆ 5 ಟನ್ ಮೇವು ಸರಬರಾಜು ಮಾಡಿದೆ. ಆದರೆ ಜಾನುವಾರುಗಳಿಗೆ ಮೇವು ವಿತರಣೆ ಮಾಡಬೇಕಾದ ಆಧಿಕಾರಿಗಳು ಮಿಟ್ಟೆಮರಿ ಗ್ರಾಮದ ಪಶು ಆಸ್ಪತ್ರೆಯ ಗೋಡಾನ್ ನಲ್ಲಿ ಮೇವು ದಾಸ್ತಾನು ಮಾಡಿ ಗೋಡಾನ್‍ಗೆ ಬೀಗ ಹಾಕಿಕೊಂಡಿದ್ದಾರೆ.

ಮೇವು ಬಂದಿರುವ ವಿಷಯ ತಿಳಿದು ಆಸ್ಪತ್ರೆ ಬಳಿ ಮೇವು ಕೊಡಿ ಅಂತ ರೈತರು ಕೇಳಿದರೆ, ಶಾಸಕರು ಬಂದು ಉದ್ಘಾಟನೆ ಮಾಡಿದ ನಂತರ ಕೊಡುತ್ತೇವೆ ಎಂದಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ರೈತರು ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾನುವಾರುಗಳಿಗೆ ಮೇವು ಇಲ್ಲದೆ ಮರದ ಎಲೆಗಳನ್ನ ತಂದು ಹಾಕುತ್ತಿದ್ದೇವೆ ಇಷ್ಟು ದಿನ ಮೇವು ಇರಲಿಲ್ಲ. ಈಗ ಮೇವು ಬಂದಿದೆ. ಈಗ ಕೊಡಿ ಅಂದರೂ ಎಂಎಲ್‍ಎ, ಎಂಪಿ ಬರಬೇಕು ಅಂತಿದ್ದಾರೆ ಎಂದು ರೈತ ಲಕ್ಷ್ಮೀಪತಿ ಹಾಗೂ ಮಂಜುನಾಥ್ ಆರೋಪಿಸಿದ್ದಾರೆ.

ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಶಾಸಕ ಸುಬ್ಬಾರೆಡ್ಡಿ, ಕಳೆದ ಎರಡು ದಿನಗಳ ಹಿಂದೆ ಮೇವು ಬಂದಿದೆ. ನಿನ್ನೆ ರಂಜಾನ್ ರಜೆ ಇದ್ದ ಕಾರಣ ಕೊಟ್ಟಿರಲಿಲ್ಲ. ಇನ್ನೂ ನಾನು ಬರೋವರಗೆ ಕೊಡಬೇಡಿ ಅಂತ ಹೇಳಲಿಲ್ಲ. ರೈತರು ಬಂದರೆ ಕೊಡಿ ಎಂದು ಹೇಳಿದ್ದೇನೆ. ಇಂದಿನಿಂದಲೇ ಬಂದವರಿಗೆ ಮೇವು ವಿತರಣೆ ಮಾಡುವಂತೆ ಸೂಚನೆ ನೀಡುವುದಾಗಿ ತಿಳಿಸಿದರು.

Comments

Leave a Reply

Your email address will not be published. Required fields are marked *