ಮಂಡ್ಯದಲ್ಲಿ ಸಹಕಾರ ನೀಡಿದ್ದಕ್ಕೆ ಕೇಂದ್ರದಲ್ಲೂ ಸುಮಲತಾ ಎನ್‍ಡಿಎ ಬೆಂಬಲಿಸಲಿ – ಕರಂದ್ಲಾಜೆ

– ರಾಜ್ಯಕ್ಕೆ ಸುಷ್ಮಾ, ಉಮಾ, ಸುಮಿತ್ರಾ ಯಾರಾದ್ರು ಓಕೆ

ಉಡುಪಿ: ಮಂಡ್ಯ ಸಂಸದೆ ಸುಮಲತಾಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಬೇಷರತ್ ಬೆಂಬಲ ಕೊಟ್ಟಿತ್ತು. ಈಗ ಅವರು ಗೆದ್ದ ಮೇಲೆ ಬಿಜೆಪಿಗೆ ಅಥವಾ ಎನ್‍ಡಿಎಗೆ ಬೆಂಬಲ ಕೊಡಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಕೇಳಿಕೊಂಡಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಸಂಸತ್ ವಿಪಕ್ಷ ಸ್ಥಾನಕ್ಕೆ ಎರಡು ಸೀಟು ಕೊರತೆ ಹಿನ್ನೆಲೆಯಲ್ಲಿ ಕಾಂಗ್ರೆಸ್‍ಗೆ ಸಂಸದೆ ಸುಮಲತಾ ಅವರ ಬೆಂಬಲ ಅಪೇಕ್ಷಿಸುತ್ತಿರುವ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಸಿಕ್ಕಿದೆ. ಮಂಡ್ಯದಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಸುಮಲತಾ ಗೆದ್ದರು. ಸುಮಲತಾಗೆ ಬಿಜೆಪಿ ಪೂರ್ಣ ಬೆಂಬಲ ಕೊಟ್ಟಿತ್ತು. ಗೆದ್ದಿರುವ ಅವರು ನಮಗೆ ಬೆಂಬಲಿಸ್ತಾರೆ ಎಂಬ ಭರವಸೆ ಇದೆ. ಇಷ್ಟಕ್ಕೂ ಪಕ್ಷೇತರರಾಗಿ ಅವರು ಯಾವ ತೀರ್ಮಾನ ತೆಗೆದುಕೊಳ್ಳಲು ಮುಕ್ತರಾಗಿದ್ದಾರೆ ಎಂದರು.

ಸುಷ್ಮಾ-ಉಮಾ-ಸುಮಿತ್ರಾ ಯಾರಾದ್ರು ಓಕೆ
ರಾಜ್ಯಕ್ಕೆ ನೂತನ ಮಹಿಳಾ ರಾಜ್ಯಪಾಲರ ನೇಮಕಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶೋಭಾ, ಮೂವರು ಬಿಜೆಪಿ ನಾಯಕಿಯರಾದ ಸುಮಿತ್ರಾ ಮಹಾಜನ್, ಸುಷ್ಮಾ ಸ್ವರಾಜ್, ಉಮಾ ಭಾರತಿ ರಾಜ್ಯಕ್ಕೆ ಪರಿಚಿತರು. ಮೂವರಲ್ಲಿ ಯಾರು ರಾಜ್ಯಪಾಲರಾದರೂ ನಮಗೆ ಖುಷಿ ಅಂತ ಹೇಳಿದರು.

ಸುಮಿತ್ರಾ ಹಿರಿಯ ಸ್ಪೀಕರ್ ಆಗಿ ಇಡೀ ದೇಶಕ್ಕೆ ಪರಿಚಿತರು. ಸುಮಿತ್ರಾ ಹೆಚ್ಚು ಬಾರಿ ಸಂಸದರೂ ಆಗಿದ್ದಾರೆ. ಉಮಾ ಭಾರತಿಗೆ ಈದ್ಗಾ ಹೋರಾಟದಲ್ಲಿ ಗುರುತಿಸಿಕೊಂಡವರು. ಯಾರು ರಾಜ್ಯಪಾಲರಾದರೂ ನಮಗೆ ಸಂತಸವಾಗುತ್ತದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

 

Comments

Leave a Reply

Your email address will not be published. Required fields are marked *