ಸಭೆಯಲ್ಲಿ ಮೊಬೈಲ್ ಬಳಸ್ಬೇಡಿ: ಸಚಿವರಿಗೆ ಯೋಗಿ ಸೂಚನೆ

– ಕ್ಯಾಬಿನೆಟ್ ಸಭೆಗೂ ಸೂಚನೆ ಅನ್ವಯ

ಲಕ್ನೋ: ಅಧಿಕೃತ ಸಭೆಯಲ್ಲಿ ಮೊಬೈಲ್ ಫೋನ್ ಬಳಸದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಚಿವರಿಗೆ ಸೂಚನೆ ನೀಡಿದ್ದಾರೆ.

ಚರ್ಚೆಯಲ್ಲಿ ಸಚಿವರು ಭಾಗಿಯಾಗುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಮೊಬೈಲ್‍ನಿಂದ ಉಂಟಾಗುವ ಅಡಚಣೆ ತಡೆಯುವ ನಿಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಆದೇಶವು ಕ್ಯಾಬಿನೆಟ್ ಸಭೆಗೂ ಅನ್ವಯವಾಗುತ್ತದೆ ಎಂದು ಮುಖ್ಯಮಂತ್ರಿಗಳ ಹಿರಿಯ ಕಾರ್ಯದರ್ಶಿಯೊಬ್ಬರು ತಿಳಿಸಿದ್ದಾರೆ.

ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರ ಎದುರಿಸುತ್ತಿರುವ ಸವಾಲುಗಳ ಕುರಿತಾದ ಚರ್ಚೆಯಲ್ಲಿ ಸಚಿವರು ಗಮನ ಕೇಂದ್ರಿಕರಿಸಬೇಕು. ಸಭೆ ನಡೆದಾಗ ಮೊಬೈಲ್‍ನಿಂದ ಅಡಚಣೆ ಉಂಟಾಗುತ್ತಿದೆ. ಅಷ್ಟೇ ಅಲ್ಲದೆ ಕೆಲವು ಸಚಿವರು ಸಭೆಯಲ್ಲಿಯೂ ಮೊಬೈಲ್ ಹಿಡಿದುಕೊಂಡು ವಾಟ್ಸಪ್ ಮೆಸೇಜ್ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಅಧಿಕೃತ ಸಭೆಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಮೊಬೈಲ್ ಫೋನ್ ಹ್ಯಾಕ್ ಮಾಡುವ ಮೂಲಕ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು ಬಹಿರಂಗವಾಗುತ್ತವೆ ಎಂಬ ಕಾರಣಕ್ಕೂ ಯೋಗಿ ಆದಿತ್ಯನಾಥ್ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೇಳಿ ಬಂದಿದೆ.

ಈ ಹಿಂದೆ ಸಭೆಗೆ ಮೊಬೈಲ್ ಫೋನ್ ತರಲು ಮಂತ್ರಿಗಳಿಗೆ ಅವಕಾಶವಿತ್ತು. ಆದರೆ ಸೈಲೆಂಟ್ ಮೂಡ್‍ನಲ್ಲಿ ಇಡಬೇಕು, ಇಲ್ಲವೆ ಸ್ವಿಚ್‍ಆಫ್ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಈಗ ಸಭೆಗೂ ಮುನ್ನ ಕೌಂಟರ್ ನಲ್ಲಿ ಮೊಬೈಲ್ ಇಟ್ಟು ಟೋಕನ್ ಪಡೆಯಬೇಕು. ಸಭೆಯ ಬಳಿಕ ಟೋಕನ್ ನೀಡಿ ತಮ್ಮ ತಮ್ಮ ಮೊಬೈಲ್ ಪಡೆಬೇಕು ಎನ್ನುವ ಸೂಚನೆಯನ್ನು ಯೋಗಿ ಆದಿತ್ಯನಾಥ್ ನೀಡಿದ್ದಾರೆ ಎನ್ನಲಾಗಿದೆ.

ಈ ಸೂಚನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಿಗೆ ನೀಡಿದ್ದರು.

Comments

Leave a Reply

Your email address will not be published. Required fields are marked *