ಮೋದಿ, ಸೋನಿಯಾ, ರಾಹುಲ್ ಮಿಮಿಕ್ರಿ ಮಾಡುತ್ತಿದ್ದ ವ್ಯಾಪಾರಿ ಅರೆಸ್ಟ್

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕೀಯ ನಾಯಕರ ಮಿಮಿಕ್ರಿ ಮಾಡುತ್ತಿದ್ದ ವ್ಯಾಪಾರಿಯನ್ನು ರೈಲ್ವೇ ಭದ್ರತಾ ಸಿಬ್ಬಂದಿ (ಆರ್ ಪಿಎಫ್) ಬಂಧಿಸಿದ್ದಾರೆ.

ಅದ್ವೇಶ್ ದುಬೆ ಬಂಧಿತ ವ್ಯಾಪಾರಿ. ಅದ್ವೇಶ್ ವ್ಯಾಪಾರ ವೇಳೆ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಗುಜರಾತ್‍ನ ಸೂರತ್ ರೈಲು ನಿಲ್ದಾಣದಲ್ಲಿ ಆರ್ ಪಿಎಫ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಅದ್ವೇಶ್ ದುಬೆ ಗೊಂಬೆ, ಆಟಿ ವಸ್ತುಗಳ ಹಾಗೂ ವೆನಿಟಿ ಬ್ಯಾಗ್ ವ್ಯಾಪಾರಿ. ರೈಲಿನಲ್ಲಿ ವ್ಯಾಪಾರ ಮಾಡುತ್ತಿದ್ದ. ಆದರೆ ಗ್ರಾಹಕರನ್ನು ಮೆಚ್ಚಿಸುವ ಉದ್ದೇಶದಿಂದ ಪ್ರಧಾನಿ ಮೋದಿ, ಕಾಂಗ್ರೆಸ್ ಸಂಸದೀಯ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ನಾಯಕರ ಮಿಮಿಕ್ರಿ ಮಾಡುತ್ತಿದ್ದ.

ಪ್ರಯಾಣಿಕರೊಬ್ಬರು ಅದ್ವೇಶ್ ದುಬೆ ಮಿಮಿಕ್ರಿ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ರೈಲ್ವೇ ಪೊಲೀಸರ ಗಮನಕ್ಕೆ ಬಂದಿತ್ತು. ತಕ್ಷಣವೇ ಅದ್ವೇಶ್ ಗಾಗಿ ಹುಡುಕಾಟ ನಡೆಸಿ, ಬಂಧಿಸಿದ್ದಾರೆ.

ಅದ್ವೇಶ್ ದುಬೆ ಮೂಲತಃ ಉತ್ತರ ಪ್ರದೇಶದ ವಾರಣಾಸಿ ನಿವಾಸಿ. ಅಲ್ಲಿಂದ ಗುಜರಾತ್‍ನ ವಲ್ಸಾದ್‍ಗೆ ವಲಸೆ ಬಂದಿದ್ದಾನೆ. ವಾಪಿ ಹಾಗೂ ಸೂರತ್ ಮಧ್ಯೆ ಸಂಚರಿಸುವ ರೈಲುಗಳಲ್ಲಿ ಗೊಂಬೆ, ಆಟಿಗೆ ಸೇರಿದಂತೆ ಕೆಲವು ವಸ್ತುಗಳನ್ನು ಮಾರಿ ಜೀವನ ನಡೆಸುತ್ತಿದ್ದ ಎಂದು ಆರ್ ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಅದ್ವೇಶ್ ದುಬೆ ಮಿಮಿಕ್ರಿ ವಿಡಿಯೋ ವೈರಲ್ ಆಗಿದ್ದು, ಅದನ್ನು ನಾವು ಪಡೆದಿದ್ದೇವೆ. ಆರೋಪಿಗೆ ಶುಲ್ಕ ವಿಧಿಸಿದ್ದೇವೆ ಎಂದು ಸೂರತ್‍ನ ಆರ್ ಪಿಎಫ್ ಇನ್‍ಸ್ಪೇಕ್ಟರ್ ಈಶ್ವರ್ ಸಿಂಗ್ ಯಾದವ್ ಹೇಳಿದ್ದಾರೆ.

ಬಂಧಿತ ಅದ್ವೇಶ್ ದುಬೆ ವಿರುದ್ಧ ರೈಲ್ವೇ ಕಾಯ್ದೆ ಸೆಕ್ಷನ್ 44 (ಭಿಕ್ಷಾಟನೆ ನಿಷೇಧ), 145 ಬಿ (ಪ್ರಯಾಣಿಕರಿಗೆ ಕಿರುಕುಳ ಅಥವಾ ನಿಷೇಧಿತ ಭಾಷೆ ಬಳಕೆ) ಹಾಗೂ 147 (ಪರವಾನಿಗೆ ರಹಿತ ವ್ಯಾಪಾರ)ಅಡಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ 10 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.

Comments

Leave a Reply

Your email address will not be published. Required fields are marked *