ಜಿಂದಾಲ್ ಉತ್ತಮ ಕಂಪನಿ, ಯಾವುದೇ ಬಾಕಿ ಉಳಿಸಿಕೊಂಡಿಲ್ಲ – ಜಾರ್ಜ್

ಬೆಂಗಳೂರು: ಜಿಂದಾಲ್ ಉತ್ತಮ ಕಂಪನಿಯಾಗಿದ್ದು ಸರ್ಕಾರಕ್ಕೆ ಯಾವುದೇ ರೀತಿಯ ಬಾಕಿ ಉಳಿಸಿಕೊಂಡಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಕೆ.ಜೆ ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಂದಾಲ್ ಕಂಪನಿಯಿಂದ ಹಣ ಪಡೆದು ಮೈತ್ರಿ ಸರ್ಕಾರ ಅವರಿಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.

1971ರಲ್ಲಿ 7 ಸಾವಿರ ಎಕರೆ ಭೂಮಿಯನ್ನು ಕೇಂದ್ರ ಸರ್ಕಾರ ವಶ ಪಡಿಸಿಕೊಂಡಿತ್ತು. ಆಗ ದೇವೇಗೌಡರು ನೇತೃತ್ವದ ಸರ್ಕಾರ 1995 ರಲ್ಲಿ 3 ಸಾವಿರ ಎಕ್ರೆಯನ್ನು ವಿಜಯನಗರ ಘಟಕಕ್ಕೆ ನೀಡಿದ್ದರು. ನಂತರ ಈ ಭೂಮಿಯನ್ನು 2005 ರಲ್ಲಿ ಧರ್ಮಸಿಂಗ್ ಸಿಎಂ ಆಗಿದ್ದಾಗ ಲೀಸ್ ಕೊಡಲಾಗಿತ್ತು. 2006ರಲ್ಲಿ ಸಿಎಂ ಆದ ಕುಮಾರಸ್ವಾಮಿ ಅವರು ಎಕ್ರೆಗೆ 90 ಸಾವಿರ ನಿಗದಿ ಮಾಡಿ 2007ರಲ್ಲಿ ಸುಮಾರು 1,200 ಎಕ್ರೆರೆ ಜಾಗವನ್ನು ಹೆಚ್ಚುವರಿಯಾಗಿ ನೀಡಿದ್ದರು ಎಂದು ತಿಳಿಸಿದರು.

ಈಗ 90 ಸಾವಿರ ಬದಲಾಗಿ 1.26 ಲಕ್ಷ ಪ್ರತಿ ಎಕರಗೆ ಬೆಲೆ ನಿಗದಿ ಮಾಡಲಾಗಿದೆ. ಹೊಸ ದರದ ಅನ್ವಯ ಸರ್ಕಾರ ಭೂಮಿಯನ್ನು ನೀಡಿದೆ. ಜೆಎಸ್‍ಡಬ್ಲೂ ಈಗ ಎಲ್ಲಾ ಷರತ್ತುಗಳನ್ನ ಒಪ್ಪಿಕೊಂಡಿದೆ ಮತ್ತು ಯಾವುದೇ ಹಣವನ್ನು ಬಾಕಿ ಉಳಿಸಿಕೊಂಡಿಲ್ಲ. ಹೀಗಾಗಿ ಕ್ಯಾಬಿನೆಟ್‍ನಲ್ಲಿ ಒಪ್ಪಿಗೆ ನೀಡಲಾಗಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಬಂದ ಹಿನ್ನಲೆಯಲ್ಲಿ ಅದನ್ನು ಆಗ ಮಾಡಲು ಸಾಧ್ಯವಾಗಿರಲಿಲ್ಲ. ರಾಜ್ಯಕ್ಕೆ ಕೈಗಾರಿಕೆ ಬರುವ ಹಿನ್ನಲೆಯಲ್ಲಿ ನಾವು ಜಿಂದಾಲ್‍ಗೆ ಭೂಮಿ ನೀಡಲಾಗಿದೆ. ಈ ವಿಚಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಕೆ.ಜೆ ಜಾರ್ಜ್ ಸಮರ್ಥಿಸಿಕೊಂಡರು.

ಇದೇ ವೇಳೆ ಎಚ್.ಕೆ ಪಾಟೀಲ್ ಅವರ ಪತ್ರದ ಬಗ್ಗೆ ಕೇಳಿದ್ದಾಗ, ಅವರಿಗೆ ಏನಾದರೂ ಸಂಶಯ ಇದ್ದರೆ ಅವರು ನನ್ನ ಕೇಳಿದರೆ ಹೇಳುತ್ತೇನೆ. ಆ ರೀತಿಯ ಅಕ್ರಮ ನಡೆದಿರುವ ಬಗ್ಗೆ ದಾಖಲಾತಿ ಇದ್ದರೆ ನೀಡಲಿ ನಾನು ಪರಿಶೀಲನೆ ಮಾಡಿಸುತ್ತೇನೆ. ಅವರು ನನ್ನ ಸಹೋದ್ಯೋಗಿ ಅವರ ಜೊತೆ ನಾನು ಮಾತನಾಡುತ್ತೇನೆ. ನಮಗೆ ರಾಜ್ಯದ ಹಿತ ಮುಖ್ಯ ಜೆಎಸ್‍ಡಬ್ಲೂ ಉತ್ತಮ ಸಂಸ್ಥೆ ರಾಜ್ಯಕ್ಕೆ ಕೈಗಾರಿಕೆ ಬಂದರೆ ನಮ್ಮ ಅನುಕೂಲವಾಗುತ್ತದೆ. ಅನಾವಶ್ಯಕವಾಗಿ ಸುದ್ದಿ ಮಾಡಿದರೆ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತದೆ ಎಂದು ಹೇಳಿದರು.

ಜಿಂದಾಲ್ ಅಕ್ರಮ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಭಟನೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿದ ಜಾರ್ಜ್, ಈಗ ನಾನು ಹೇಳಿದ ಅಂಶಗಳ ಬಗ್ಗೆ ಯಡಿಯೂರಪ್ಪ ಗಮನಹರಿಸಲಿ. ಇದರಲ್ಲಿ ಏನಾದರೂ ತಪ್ಪು ಇದ್ದರೆ ನನ್ನನ್ನು ಕೇಳಲಿ ಅಮೇಲೆ ನಾನು ಉತ್ತರ ಕೊಡುತ್ತೇನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *