ಪತಿಯ ರುಂಡ ಹಿಡಿದು ಪೊಲೀಸ್ ಠಾಣೆಗೆ ಬಂದ ಮಹಿಳೆ

ಗುವಾಹಟಿ: ಮಹಿಳೆಯೊಬ್ಬಳು ಪತಿಯ ರುಂಡ ಕತ್ತರಿಸಿ, ಅದನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಹಾಕಿಕೊಂಡು ಪೊಲೀಸ್ ಠಾಣೆಗೆ ಬಂದ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಸೋನಿಟ್‍ಪುರ್ ಜಿಲ್ಲೆಯ ಮಜ್ಗಾಂವ್‍ನ ನಿವಾಸಿ ಗುಣೇಶ್ವರಿ ಬರ್ಕಟಕಿ (48) ಕೊಲೆ ಮಾಡಿದ ಮಹಿಳೆ. ಮುಧಿರಾಮ್ ಕೊಲೆಯಾದ ಪತಿ. ಘಟನೆಯು ಮೇ 28ರಂದು ನಡೆದಿದ್ದು, ಮಹಿಳೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

ಮುಧಿರಾಯ್ ಮದ್ಯ ವ್ಯಸನಿಯಾಗಿದ್ದು, ಮನೆಯಲ್ಲಿ ನಿತ್ಯವೂ ಪತ್ನಿ ಗುಣೇಶ್ವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೆ ಕೊಡಲಿಯಿಂದ ಹಲ್ಲೆ ಕೂಡ ಮಾಡಿದ್ದ. ಹೀಗಾಗಿ ಪತಿಯಿಂದ ದೂರ ಇರಲು ಗುಣೇಶ್ವರಿ ನಿರ್ಧರಿಸಿದ್ದಳು. ಆದರೆ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣ ಮಕ್ಕಳ ಭವಿಷ್ಯದ ಉದ್ದೇಶದಿಂದ ಪತಿಯ ಜೊತೆಗೆ ವಾಸವಾಗಿದ್ದಳು.

ಎಂದಿನಂತೆ ಮೇ 20ರಂದು ಮದ್ಯ ಸೇವಿಸಿ ಮನೆಗೆ ಬಂದಿದ್ದ ಮುಧಿರಾಯ್ ಪತ್ನಿಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಪತಿಯ ವರ್ತನೆ, ಕ್ರೂರತೆಯಿಂದ ಕೋಪಗೊಂಡ ಗುಣೇಶ್ವರಿ ಹಲ್ಲೆ ಮಾಡಿದ್ದಾಳೆ. ಬಳಿಕ ಪತಿಯ ರುಂಡವನ್ನು ಕತ್ತರಿಸಿ, ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಹಾಕಿಕೊಂಡು ಬಂದಿದ್ದಳು ಎಂದು ಲಖಿಮ್ಪುರ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಮಂಡ್ಯದಲ್ಲಿ ಇಂತಹದ್ದೇ ಘಟನೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನಡೆದಿತ್ತು. ತಾಯಿಯನ್ನು ಬೈದಿದ್ದಕ್ಕೆ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದ ಪಶುಪತಿ ತನ್ನ ಸ್ನೇಹಿತನ ರುಂಡ ಕತ್ತರಿಸಿದ್ದ. ಬಳಿಕ ಅದನ್ನು ಹಿಡಿದುಕೊಂಡು ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದ.

Comments

Leave a Reply

Your email address will not be published. Required fields are marked *