ಮಾವಿನ ಹಣ್ಣು ನನಗೂ ಉಳಿಸಿ ಎಂದಿದ್ದಕ್ಕೆ ತಾಯಿ ಮೇಲೆ ಮಗ, ಸೊಸೆಯಿಂದ ಹಲ್ಲೆ

ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಪತ್ನಿ ಜೊತೆ ಸೇರಿಕೊಂಡು ಮಗನೊಬ್ಬ ತನ್ನ ತಾಯಿ ಮೇಲೆ ಹಲ್ಲೆ ಮಾಡಿದ ಆರೋಪವೊಂದು ಕೇಳಿಬಂದಿದೆ.

ಗೌರಮ್ಮನ ಮೇಲೆ ಸೊಸೆ ಯಶೋಧ ಹಾಗೂ ಪುತ್ರ ರಾಜೇಶ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗೌರಮ್ಮ ಮೇಲಿನ ಹಲ್ಲೆಯ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಡೆದಿದ್ದೇನು?:
ಗೌರಮ್ಮ ಅವರ ತೋಟದಲ್ಲಿ ಎರಡು ಮಾವಿನ ಮರಗಳಿವೆ. ಈ ಮರದಿಂದ ಸೊಸೆ ಹಾಗೂ ಮಗ ಮಾವಿನ ಹಣ್ಣುಗಳನ್ನು ಕೀಳುತ್ತಿದ್ದರು. ಈ ಸಂದರ್ಭದಲ್ಲಿ ಗೌರಮ್ಮ ಅವರು ತನಗೂ ಸ್ವಲ್ಪ ಉಳಿಸಿ ಎಂದು ಹೇಳಿದ್ದಾರೆ. ಅತ್ತೆಯ ಮಾತಿನಿಂದ ಕೆರಳಿದ ಸೊಸೆ ಯಶೋಧ ಮನ ಬಂದಂತೆ ಥಳಿಸಿದ್ದಾಳೆ. ತಾಯಿ ಮೇಲೆ ಪತ್ನಿ ಹಲ್ಲೆ ಮಾಡುವಾಗ ಮಗ ತಡೆಯದೇ ತಾನೂ ಅಮ್ಮನ ಮೇಲೆ ಹಲ್ಲೆಗೆ ಸಹಕರಿಸಿದ್ದಾನೆ.

ಅಲ್ಲದೆ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಸೊಸೆ, ತನ್ನ ಪತಿಯೆದುರೇ ಆತನ ತಾಯಿಗೆ ಮನಬಂದಂತೆ ಥಳಿಸಿದ್ದಾಳೆ. ಪರಿಣಾಮ ಗೌರಮ್ಮ ಕೆಳಕ್ಕೆ ಬಿದ್ದಿದ್ದಾರೆ. ಆದರೂ ಬಿಡದ ಸೊಸೆ, ವೃದ್ಧೆ ಮೇಲೆ ಹಲ್ಲೆ ನಡೆಸಿದ್ದಾಳೆ.

ಹಲ್ಲೆಯಿಂದ ಅಸ್ವಸ್ಥಗೊಂಡ ವೃದ್ಧೆಗೆ ಹೊಳೆನರಸೀಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *