ತುಮಕೂರು: ಒಂದು ವಾರದಲ್ಲಿ ಝೀರೋ ಟ್ರಾಫಿಕ್ ಕೆಳಕ್ಕೆ ಇಳಿಯಲಿದೆ. ಮೋದಿ ಪ್ರಮಾಣವಚನ ಸ್ವೀಕರಿಸುವವರೆಗೂ ಮೈತ್ರಿ ಇರಲಿದೆ. ನಂತರ ಮೈತ್ರಿ ಸರ್ಕಾರ ಉರುಳಲಿದೆ. ಮೈತ್ರಿ ಸೋಲಿಗೆ ಝೀರೋ ಟ್ರಾಫಿಕ್ ಕಾರಣ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಹಾಗೂ ಡಿಸಿಎಂ ಜಿ.ಪರಮೇಶ್ವರ್ ವಿರುದ್ಧ ಹರಿಹಾಯ್ದರು. ತುಮಕೂರು ಕಾಂಗ್ರೆಸ್ ಭದ್ರಕೋಟೆಯಾಗಿದೆ. ಬಿಜೆಪಿ ಕೆಲವೇ ಕ್ಷೇತ್ರಕ್ಕೆ ಸೀಮಿತವಾಗಿತ್ತು. ಆದರೂ ಬಸವರಾಜು ಅವರಿಗೆ ಅಭಿನಂದನೆ ಹೇಳುತ್ತೇನೆ. ಬಸವರಾಜು 20 ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರಿಗೆ ಬಿಜೆಪಿಗಿಂತ ಹೆಚ್ಚು ಕಾಂಗ್ರೆಸ್ ನಾಯಕರ ಸಂಪರ್ಕವಿದೆ. ಅವರ ವೈಯಕ್ತಿಕ ಸಂಪರ್ಕದಿಂದ ಸಹಾಯ ಪಡೆದು ಗೆದ್ದಿದ್ದಾರೆ. ನಾನು ಕಾಂಗ್ರೆಸ್ ತೊರೆದು ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಡಿಸಿಎಂರನ್ನ ಝೀರೋ ಟ್ರಾಫಿಕ್ ಎಂದು ವ್ಯಂಗ್ಯವಾಡಿದರು. ಅಲ್ಲದೆ ಜಿ.ಪರಮೇಶ್ವರ್ಗೆ ಸ್ವಯಂ ನಾನು ಸಹಕಾರ ಮಾಡಿದ್ದೆ. ನನ್ನ ಸಹಕಾರದಿಂದ ಅವನು ಗೆದ್ದು ಬಂದಿದ್ದಾನೆ. ಅವನಿಗೆ ಉಪಕಾರ ಸ್ಮರಣೆ ಇಲ್ಲ ಎಂದು ಡಿಸಿಎಂ ವಿರುದ್ದ ಕೆ.ರಾಜಣ್ಣ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಅಪೆಕ್ಸ್ ಬ್ಯಾಂಕ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೇ ಏನೇ ಮಾಡಿದರೂ ಐದು ವರ್ಷ ಪೂರೈಸಿಯೇ ಸಿದ್ಧ. ರೇವಣ್ಣ ಬರಲಿ, ಅವರ ತಾತನೇ ಬರಲಿ, ನಾನು ಐದು ವರ್ಷ ಅಧಿಕಾರ ಪೂರೈಸುತ್ತೇನೆ. ರೇವಣ್ಣ ಕೆಎಂಎಫ್ ಗೋಲ್ ಮಾಲ್ ದಾಖಲೆ ನನ್ನ ಬಳಿ ಇದೆ. ಅವರು ಏನು ಮಾಡುತ್ತಾರೋ ಮಾಡಲಿ ಎಂದು ಸವಾಲೆಸೆದಿದ್ದಾರೆ.


Leave a Reply