ಸುಮಲತಾ ಗೆಲುವಿಗೆ ಕಾರಣರಾದ ಜೆಡಿಎಸ್ ತ್ರಿಮೂರ್ತಿಗಳಿಗೆ ಅಭಿನಂದನೆ – ಬ್ಯಾನರ್ ಹಾಕಿ ವ್ಯಂಗ್ಯ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ್ದು, ಇದೀಗ ಅವರ ಬೆಂಬಲಿಗರು ಮಂಡ್ಯ ಜೆಡಿಎಸ್ ನಾಯಕರಿಗೆ ಅಭಿನಂದನೆ ಸಲ್ಲಿಸುವ ಮೂಲಕ ವ್ಯಂಗ್ಯವಾಡಿದ್ದಾರೆ.

ಮಂಡ್ಯದ ನೂರು ಅಡಿ ರಸ್ತೆಯಲ್ಲಿ ಸುಮಲತಾ ಬೆಂಬಲಿಗರು ಬ್ಯಾನರ್ ಕಟ್ಟಿದ್ದಾರೆ. ಬ್ಯಾನರ್‌ನಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠೇಗೌಡ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಫೋಟೋ ಹಾಕಿದ್ದಾರೆ. ಅವರ ಫೋಟೋ ಕೆಳಗೆ ಸುಮಲತಾ ಅಂಬರೀಶ್ ಗೆಲುವಿಗೆ ಕಾರಣರಾದ ತ್ರಿಮೂರ್ತಿಗಳಿಗೆ ಅಭಿನಂದನೆಗಳು ಎಂದು ಬರೆದಿದ್ದು, ಈ ಮೂಲಕ ಸುಮಲತಾ ಬೆಂಬಲಿಗರು ವ್ಯಂಗ್ಯವಾಡಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನಾ ಸುಮಲತಾ ವಿರುದ್ಧ ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠೇಗೌಡ ಹಾಗೂ ಎಲ್.ಆರ್.ಶಿವರಾಮೇಗೌಡ ಅವರು ಲಘು ಟೀಕೆ ಮಾಡಿದ್ದರು. ಇದರಿಂದ ಈ ಮೂವರು ಜೆಡಿಎಸ್ ನಾಯಕರು ಸುಮಲತಾ ಗೆಲುವಿಗೆ ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಬೆಂಬಲಿಗರು ಈ ರೀತಿ ಮಾಡಿದ್ದಾರೆ.

ಸುಮಲತಾ ಮನೆಗೆ ಬಂದವರಿಗೆ ಒಂದು ಲೋಟ ನೀರು ಕೊಡುತ್ತಿರಲಿಲ್ಲ ಎಂದು ತಮ್ಮಣ್ಣ ಟೀಕೆ ಮಾಡಿದ್ದರು. ಇನ್ನೂ ಶ್ರೀಕಂಠೇಗೌಡ, ಸುಮಲತಾ ಗೌಡ್ತಿ ಅಲ್ಲ ಎಂಬ ಹೇಳಿಕೆ ನೀಡಿದ್ದರು. ಸುಮಲತಾ ಆಂಧ್ರ ನಾಯ್ಡು, ಸಿನಿಮಾದವರನ್ನು ನಂಬಬೇಡಿ ಎಂದು ಶಿವರಾಮೇಗೌಡ ವ್ಯಂಗ್ಯ ಮಾಡಿದ್ದಾರೆ. ಈ ಮೂವರ ಹೇಳಿಕೆಗಳಿಗೆ ಚುನಾವಣಾ ಪ್ರಚಾರದ ಸಮಯದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಅವಹೇಳನಕಾರಿ ಹೇಳಿಕೆಗಳಿಂದ ಸುಮಲತಾ ಗೆಲುವಿಗೆ ಸಹಕಾರ ಆಯ್ತು ಎಂದು ಅಭಿನಂದನಾ ಬ್ಯಾನರ್ ಹಾಕುವ ಮೂಲಕ ಜೆಡಿಎಸ್ ನಾಯಕರ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *