ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲುವು: ಶೋಭಾ ಕರಂದ್ಲಾಜೆ

ಉಡುಪಿ: ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಹಾಕಾಳಿ ಜನಾರ್ದನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶೋಭಾ ಕರಂದ್ಲಾಜೆ, ಕಳೆದ ಬಾರಿಗಿಂತ ದೊಡ್ಡ ಅಂತರದಲ್ಲಿ ಗೆದ್ದು ಮತ್ತೆ ಸಂಸದೆಯಾಗುತ್ತೇನೆ ಎಂಬ ವಿಶ್ವಾಸವಿದೆ. ಅನೇಕ ಕಾರ್ಯಕರ್ತರು ಬಹಳ ಉತ್ಸಾಹದಿಂದ ಕೆಲಸ ಮಾಡಿದ್ದು, ಅದೇ ರೀತಿ ಮತದಾರರು ಕೂಡ ಮತದಾನ ಮಾಡಿದ್ದಾರೆ. ಹೀಗಾಗಿ ಈ ಬಾರಿ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲುವ ನನ್ನದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರು ಮತ್ತು ಮೀನುಗಾರ ಸಮುದಾಯದವರು ಎದುರಾಳಿಯಾಗಿದ್ದರು. ಎಲ್ಲ ಅಂಶಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಿದ್ದೇವೆ. ಮೈತ್ರಿ ಪಕ್ಷ ಗೆಲ್ಲುವ ಭ್ರಮೆಯಲ್ಲಿದೆ. ಮೈತ್ರಿ ಸರ್ಕಾರ ರೈತರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಕರ್ನಾಟಕದಲ್ಲಿ ಅನೇಕ ಗ್ರಾಮಗಳಲ್ಲಿ ಬರಗಾಲ ಎಂದು ಫೋಷಣೆ ಮಾಡಿ, ಯಾವುದೇ ಹಳ್ಳಿಗಳಿಗೆ ಭೇಟಿ ಕೊಟ್ಟಿಲ್ಲ. ಜೊತೆಗೆ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಮೈತ್ರಿ ಸರ್ಕಾರದ ನಾಯಕರು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ನೀಡಿದ ಹೇಳಿಕೆಗಳೇ ಅವರಿಗೆ ಮುಳುವಾಗಲಿದೆ ಎಂದು ಹೇಳಿದರು.

ಮೇ 23ರ ನಂತರ ಯಾವ ಸುನಾಮಿ ಬರುತ್ತೋ ಗೊತ್ತಿಲ್ಲ. ಕರ್ನಾಟಕ ಸರ್ಕಾರದಲ್ಲಿ ಭೂಕಂಪ ಆಗುತ್ತೋ ಗೊತ್ತಿಲ್ಲ, ಕಾದು ನೋಡಬೇಕಿದೆ. ರೋಷನ್ ಬೇಗ್, ಪರಮೇಶ್ವರ್ ಹೇಳಿಕೆ ಮತ್ತು ಸಿದ್ದರಾಮಯ್ಯ ಅವರು ಟ್ವೀಟ್ ಇದೆಲ್ಲವನ್ನು ನೋಡಿದರೆ ಸರ್ಕಾರದಲ್ಲಿ ಯಾವುದು ಸರಿ ಇಲ್ಲ ಎಂದು ತಿಳಿಯುತ್ತದೆ. ಇಂದಿನ ಫಲಿತಾಂಶ ನಂತರ ಕಾಂಗ್ರೆಸ್-ಜೆಡಿಎಸ್ ಕಿತ್ತಾಡಿಕೊಂಡು ಅವರವರೇ ನಾಶವಾಗುತ್ತಾರೆ ಎಂದು ಶೋಭಾ ಕರಂದ್ಲಾಜೆ ಭವಿಷ್ಯ ನುಡಿದರು.

Comments

Leave a Reply

Your email address will not be published. Required fields are marked *