ಮತ್ತೆ ಮೋದಿ ಪ್ರಧಾನಿ – ಸಂಭ್ರಮಕ್ಕೆ ಸಿದ್ಧವಾಗುತ್ತಿದೆ 2 ಸಾವಿರ ಕೆಜಿ ಸ್ವೀಟ್

ಮುಂಬೈ: ಲೋಕಸಭಾ ಚುನಾವಣಾ ಫಲಿತಾಂಶ ಮೇ 23ರಂದು ಹೊರ ಬೀಳಲಿದ್ದು, ಗೆಲುವಿನ ಸಂಭ್ರಮ ಆಚರಿಸಿಕೊಳ್ಳಲು ಬಿಜೆಪಿ ಸಕಲ ಸಿದ್ಧತೆ ನಡೆಸಿದೆ. ಇತ್ತ ಮುಂಬೈನ ಬೊರಿವಲಿ ಪ್ರದೇಶದ ಸ್ವೀಟ್‍ಮಾರ್ಟ್ ನಲ್ಲಿ ಸಿಬ್ಬಂದಿ ಮೋದಿ ಮುಖವಾಡ ಧರಿಸಿ ವಿವಿಧ ಬಗೆಯ ಸಿಹಿ ಖಾದ್ಯ ತಯಾರಿಸುತ್ತಿದ್ದಾರೆ.

ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ಅವರು 1500-2000 ಕೆ.ಜಿ. ಸಿಹಿ ಖಾದ್ಯಗಳ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸಿಬ್ಬಂದಿ ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿ ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಸ್ವೀಟ್‍ಮಾರ್ಟ್ ಮಾಲೀಕ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಮೇ 19 ರಂದು ನಡೆದ ಕೊನೆಯ ಹಂತದ ಮತದಾನ ನಡೆಯಿತು. ಅಂದು ಸಂಜೆ ಬಿಡುಗಡೆಯಾದ ಬಹುಪಾಲು ಎಕ್ಸಿಟ್ ಪೋಲ್‍ಗಳು ಮತ್ತೊಮ್ಮೆ ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆಗೆ ಮುಂದಾಗಿದೆ ಎಂದು ತಿಳಿಸಿದ್ದವು. ಇದರಿಂದಾಗಿ ಎನ್‍ಡಿಎ ಮೈತ್ರಿ ಕೂಟದಲ್ಲಿ ಸಂತೋಷದ ಅಲೆ ಎದ್ದಿದ್ದು, ವಿರೋಧ ಪಕ್ಷಗಳು ನಿರಾಶೆಯಲ್ಲಿ ಮುಳುಗಿವೆ. ಈ ಮೂಲಕ ಬಿಜೆಪಿ ನಾಯಕರು ಮತ ಎಣಿಕೆಗೂ ಎರಡು ದಿನಗಳ ಮೊದಲೇ ಸಿಹಿತಿಂಡಿಗಳಿಗೆ ಬೇಡಿಕೆ ಇಟ್ಟಿದ್ದಾರೆ.

ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಗೋಪಾಲ್ ಶೆಟ್ಟಿ ವಿರುದ್ಧ ಚಿತ್ರದ ನಟಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಉರ್ಮಿಳಾ ಮಾತೋಂಡ್ಕರ್ ಕಣಕ್ಕೆ ಇಳಿದಿದ್ದಾರೆ. ಸಮೀಕ್ಷೆಗಳ ಪ್ರಕಾರ ತಮ್ಮ ಗೆಲುವು ಖಚಿತ ಹಾಗೂ ಕೇಂದ್ರದಲ್ಲಿ ಮತ್ತೆ ಎನ್‍ಡಿಎ ಸರ್ಕಾರ ರಚನೆಯಾಗುತ್ತದೆ ಎಂಬ ಡಬಲ್ ಸಂಭ್ರಮದಲ್ಲಿರುವ ಗೋಪಾಲ್ ಶೆಟ್ಟಿ ಅವರು 2 ಸಾವಿರ ಕೆಜಿ ಸ್ವೀಟ್‍ಗೆ ಬೇಡಿಕೆ ಇಟ್ಟಿದ್ದಾರೆ.

Comments

Leave a Reply

Your email address will not be published. Required fields are marked *