ವಿಜಯಪುರದಲ್ಲಿ ನೀರು ಕಳ್ಳರ ಗ್ಯಾಂಗ್

ವಿಜಯಪುರ: ಸಾಮಾನ್ಯವಾಗಿ ಸರಗಳ್ಳರು, ಮನೆಗಳ್ಳರು, ಡೀಸೆಲ್ ಕಳ್ಳರು ಸೇರಿದಂತೆ ಅನೇಕ ಕಳ್ಳತನ ನೋಡಿರುತ್ತೇವೆ. ಐತಿಹಾಸಿಕ ಜಿಲ್ಲೆ ವಿಜಯಪುರದಲ್ಲಿ ಹೊಸದೊಂದು ಕಳ್ಳತನವನ್ನ ಖದೀಮರ ಗ್ಯಾಂಗ್ ಪ್ರಾರಂಭಿಸಿದೆ. ಈ ಕಳ್ಳತನದಿಂದ ಜಿಲ್ಲೆಯ ಜನರು ಪರದಾಡುವಂತಾಗಿದೆ.

ಬೇಸಿಗೆಗಾಲ ಬಂದರೆ ಸಾಕು ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ತಲೆಕೆಡಿಸಿಕೊಳ್ತಾರೆ. ವಿಜಯಪುರ ಜಿಲ್ಲೆ ತಿಕೋಟಾದಲ್ಲಿ ಮಾತ್ರ ಹೊಸ ಕಳ್ಳರು ಎಂಟ್ರಿಯಾಗಿದ್ದಾರೆ. ಅವರೇ ನೀರು ಮಾರಾಟಗಳ್ಳರು. ಇಲ್ಲಿನ ತಿಕೋಟಾ ಕೆರೆಯ ಸುತ್ತಲಿನ ಜಮೀನುಗಳ ಮುಗ್ಧ ರೈತರಿಗೆ ಒಂದಿಷ್ಟು ಹಣ ನೀಡಿ ಅವರ ಜಮೀನಿನಲ್ಲಿ ಕೊಳವೆಬಾವಿ ಕೊರೆಸುತ್ತಾರೆ. ನಂತರ ನೀರು ಮಾರಿಕೊಂಡು ಲಕ್ಷಾಂತರ ರೂಪಾಯಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ.

ಕೆಲವರು ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ನಿರಂತರವಾಗಿ ಬೋರ್ ವೆಲ್‍ನಿಂದ ಕೃಷಿ ಹೊಂಡಕ್ಕೆ ನೀರು ತುಂಬಿಸಿ ಅಲ್ಲಿಂದ ಟ್ರ್ಯಾಕ್ಟರ್, ಲಾರಿಗಳ ಟ್ಯಾಂಕರ್‍ಗಳಿಗೆ ನೀರು ಮಾರಾಟ ಮಾಡುತ್ತಿದ್ದಾರೆ. ಟ್ರ್ಯಾಕ್ಟರ್ ಗೆ 500 ರೂಪಾಯಿ, ಲಾರಿ ಟ್ಯಾಂಕರ್ ಗಳಿಗೆ ಒಂದು ಸಾವಿರ ರೂಪಾಯಿಯಂತೆ ನೀರು ಮಾರಾಟ ಮಾಡಲಾಗುತ್ತಿದೆ. ಕೆರೆಯ ಸುತ್ತಲಿನ ಜಮೀನುಗಳಲ್ಲಿ ಮಿತಿಮೀರಿ ಸಾಲುಸಾಲು ಬೋರವೆಲ್ ಕೊರೆದು ನೀರು ತೆಗೆಯುತ್ತಿರೋದ್ರಿಂದ ದಿನದಿಂದ ದಿನಕ್ಕೆ ಕೆರೆ ಬತ್ತಿಹೋಗ್ತಿದೆ. ಇದರಿಂದ ಕುಡಿಯೋ ನೀರಿಗೂ ಬರ ಎದುರಿಸಬೇಕಾಗಿದೆ.

ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ದಂಧೆ ನಡೆಯುತ್ತಿದ್ದರೂ ಸಹ ಯಾವೊಬ್ಬ ಅಧಿಕಾರ ಇತ್ತ ಗಮನಹರಿಸಿಲ್ಲ. ಈ ಅಕ್ರಮ ಜೀವಜಲ ದಂಧೆಗೆ ಕಡಿವಾಣ ಹಾಕದಿದರೆ ಪರದಾಡುವ ಪರಿಸ್ಥಿತಿ ಎದುರಾಗಲಿದೆ ಅನ್ನೋದು ಜನರ ಆತಂಕವಾಗಿದೆ.

Comments

Leave a Reply

Your email address will not be published. Required fields are marked *